×
Ad

ಕನ್ವರ್ ಯಾತ್ರೆ ಹಿನ್ನೆಲೆ: ಉತ್ತರಪ್ರದೇಶದಲ್ಲಿ ಅಂಗಡಿ ಮಾಲೀಕರ ಧರ್ಮ ದಾಖಲೀಕರಣ ಹೈಟೆಕ್!

Update: 2025-07-07 07:29 IST

PC: X.com/ANI

ಲಕ್ನೋ: ಕನ್ವರ್ ಯಾತ್ರೆ ನಡೆಯುವ ಮಾರ್ಗದ ಬದಿಯ ಎಲ್ಲ ಅಂಗಡಿ ಮತ್ತು ಡಾಬಾ ಮಾಲೀಕರು ತಮ್ಮ ಹೆಸರು ಹಾಗೂ ಆ ಮೂಲಕ ಧರ್ಮವನ್ನು ವಿವರಿಸುವ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಯೋಗಿ ಆದಿತ್ಯನಾಥ್ ಸರ್ಕಾರದ ಸೂಚನೆಗೆ ಕಳೆದ ವರ್ಷ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಆದ್ದರಿಂದ ಈ ಬಾರಿ ರಾಜ್ಯ ಸರ್ಕಾರ ಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ಪಕ್ಕಕ್ಕಿಟ್ಟು ತಮ್ಮ ಗುರಿ ಸಾಧನೆಗೆ ತಂತ್ರಜ್ಞಾನದ ಮೊರೆ ಹೋಗಿದೆ.

ಉತ್ತರ ಪ್ರದೇಶ ಸರ್ಕಾರದ ಆಹಾರ ಸುರಕ್ಷೆ ಮತ್ತು ಔಷಧ ನಿರ್ವಹಣಾ ಇಲಾಖೆ, ಕನ್ವರ್ ಯಾತ್ರೆಯ ಮಾರ್ಗದ ಎಲ್ಲ ಡಾಬಾ ಮತ್ತು ಅಂಗಡಿಗಳ ಮಾಲೀಕರು ಮಂಡಳಿಯಲ್ಲಿ ನೋಂದಾಯಿಸಿರುವ ತಮ್ಮ ಹೆಸರುಗಳನ್ನು ಮತ್ತು ಅವರಿಗೆ ಹಂಚಿಕೆ ಮಾಡಿರುವ ಕ್ಯೂಆರ್ ಕೋಡ್ ಪ್ರದರ್ಶಿಸಬೇಕು ಎಂದು ಕಡ್ಡಾಯಪಡಿಸಿದೆ.

ಮೇಲ್ನೋಟಕ್ಕೆ ಈ ವಿನೂತನ ಕ್ಯೂಆರ್ ಕೋಡ್ ಗುಣಮಟ್ಟ ನಿಯಂತ್ರಣದ ಉದ್ದೇಶ ಹೊಂದಿದೆ. ಗ್ರಾಹಕರು ಈ ಕ್ಯೂಆರ್ ಕೋಡ್ ಬಳಸಿ ಅಲ್ಲಿನ ಆಹಾರ ಅಥವಾ ಸೇವೆಗಳ ಬಗ್ಗೆ ಪುರಾವೆಗಳ ಚಿತ್ರಗಳನ್ನು ಅಪ್ಲೋಡ್ ಮಾಡಿ ಅಭಿಪ್ರಾಯಗಳನ್ನು ತಿಳಿಸಲು ಅಥವಾ ದೂರುಗಳನ್ನು ದಾಖಲಿಸಲು ಅವಕಾಶವಿರುತ್ತದೆ. ಆದರೆ ಈ ಕ್ಯೂಆರ್ ಕೋಡ್, ಮಾಲೀಕರ ಹೆಸರು ಹಾಗೂ ಅವರ ಧರ್ಮವನ್ನು ಬಹಿರಂಗಪಡಿಸುತ್ತದೆ.

"ಅಂಗಡಿ ಮತ್ತು ಡಾಬಾ ಮಾಲೀಕರ ವಿವರಗಳನ್ನು ತಿಳಿಯಬಯಸುವವರು ಇಲಾಖೆಯ ಡಿಜಿಟಲ್ ಅಪ್ಲಿಕೇಶನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾಲೀಕರ ಗುರುತನ್ನು ತಿಳಿದುಕೊಳ್ಳಬಹುದು" ಎಂದು ಇಲಾಖೆಯ ಆದೇಶ ಸ್ಪಷ್ಟಪಡಿಸಿದೆ. "ಅಂಗಡಿ ಮತ್ತು ಹೋಟಲ್ ಮಾಲೀಕರು ನೋಂದಾಯಿತ ಹೆಸರು ಮತ್ತು ಸಂಖ್ಯೆಯನ್ನು ಹೊಂದಿರುತ್ತಾರೆ. ನಾವು ಕ್ಯೂಆರ್ ಕೋಡ್ ನೀಡುವ ಮೂಲಕ ಪ್ರತಿಯೊಬ್ಬರು ತಮ್ಮ ಫಲಕಗಳಲ್ಲಿ ಈ ಕ್ಯೂಆರ್ ಕೋರ್ಡ್ ಮುದ್ರಿಸುವುದನ್ನು ಕಡ್ಡಾಯಪಡಿಸಿದ್ದೇವೆ" ಎಂದು ಇಲಾಖೆ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News