‘ಆಪರೇಷನ್ ಸಿಂಧೂರ್’ ಹಿನ್ನೆಲೆ: 27 ವಿಮಾನ ನಿಲ್ದಾಣಗಳು ಸ್ಥಗಿತ; 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
ಜೋಧ್‌ಪುರ ವಿಮಾನ ನಿಲ್ದಾಣ PC: x.com/ttindia
ಹೊಸದಿಲ್ಲಿ: ಪಾಕಿಸ್ತಾನದ ಜತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಉತ್ತರ, ಪಶ್ಚಿಮ ಮತ್ತು ಕೇಂದ್ರ ಭಾರತದ 27 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನು ಶನಿವಾರ (ಮೇ 10) ಮುಂಜಾನೆ 5.29ರವರೆಗೆ ಸ್ಥಗಿತಗೊಳಿಸಲಾಗಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ಗುರುವಾರ ಒಟ್ಟು 430 ವಿಮಾನಗಳ ಹಾರಾಟವನ್ನು ರದ್ದುಪಡಿಸಿವೆ. ಇದು ದೇಶದ ಒಟ್ಟು ವೇಳಾಪಟ್ಟಿಯ ಶೇಕಡ 3ರಷ್ಟಾಗಿದೆ. ಪಾಕಿಸ್ತಾನ ತನ್ನ ವೈಮಾನಿಕ ವೇಳಾಪಟ್ಟಿಯ ಶೇಕಡ 17ರಷ್ಟು ಅಂದರೆ 147 ವಿಮಾನಗಳ ಸಂಚಾರ ರದ್ದುಪಡಿಸಿದೆ.
ಪಾಕಿಸ್ತಾನದ ವಾಯುಪ್ರದೇಶ ಮತ್ತು ಕಾಶ್ಮೀರದಿಂದ ಗುಜರಾತ್ ವರೆಗಿನ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ನಾಗರಿಕ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ಫ್ಲೈಟ್ ರಾಡಾರ್24 ವರದಿ ಮಾಡಿದೆ. ರದ್ದುಗೊಂಡಿರುವ ವಿಮಾನಗಳ ಮಾಹಿತಿಯನ್ನೂ ಅದು ಹಂಚಿಕೊಂಡಿದೆ. ಬಹುತೇಕ ವಿದೇಶಿ ವಿಮಾನಯಾನ ಕಂಪನಿಗಳು ಪಾಕಿಸ್ತಾನದ ವಾಯುಪ್ರದೇಶದ ಬಳಕೆಯನ್ನು ಸ್ಥಗಿತಗೊಳಿಸಿದ್ದು, ಮುಂಬೈ ಮತ್ತು ಅಹ್ಮದಾಬಾದ್ ಗೆ ಬರುವ ವಿಮಾನಗಳ ಹಾರಾಟದ ಮಾರ್ಗ ಬದಲಿಸಿವೆ.
ಶ್ರೀನಗರ, ಜಮ್ಮು, ಲೆಹ್, ಚಂಡೀಗಢ, ಅಮೃತಸರ, ಲೂಧಿಯಾನಾ, ಪಾಟಿಯಾಲಾ, ಭಟಿಂಡಾ, ಹಲ್ವಾರಾ, ಪಠಾಣ್ ಕೋಟ್, ಭೂಂತರ್, ಶಿಮ್ಲಾ, ಗಾಗ್ಗಲ್, ಧರ್ಮಶಾಲಾ, ಕಿಶನ್ ಘರ್, ಜೈಸಲ್ಮೇರ್, ಜೋಧ್‌ಪುರ, ಬಿಕನೇರ್, ಮುಂದ್ರಾ, ಜಾಮ್ ನಗರ, ರಾಜಕೋಟ್, ಪೋರ್ ಬಂದರ್, ಕಾಂಡ್ಲಾ, ಕೆಶೋಡ್, ಭುಜ್, ಗ್ವಾಲಿಯರ್ ಮತ್ತು ಹಿಂಡನ್ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ಮಿಲಿಟರಿ ಚಾರ್ಟರ್ಡ್ ವಿಮಾನಗಳ ಸೇವೆಯೂ ಸ್ಥಗಿತಗೊಂಡಿದೆ.
ಬುಧವಾರ ಸುಮಾರು 250 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ. ಅಮೃತಸರಕ್ಕೆ ತೆರಳುವ ಅಂತರರಾಷ್ಟ್ರೀಯ ವಿಮಾನಗಳನ್ನು ದೆಹಲಿಗೆ ಕಳುಹಿಸಲಾಗಿದೆ. ಅಮೆರಿಕನ್ ಏರ್ ಬುಧವಾರ ದೆಹಲಿ- ನ್ಯೂಯಾರ್ಕ್ ವಿಮಾನ ರದ್ದುಪಡಿಸಿತ್ತು.