ರಾಜ್ಯ ಶಿಕ್ಷಣ ನೀತಿ ಸಂಪೂರ್ಣ ಅನುಷ್ಠಾನಗೊಳ್ಳಲಿ : ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು, ಆ.16: ಆಧುನಿಕ ಸಮಾಜವು ತಂದೊಡ್ಡುವ ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ಹೊಸ ತಲೆಮಾರಿನಲ್ಲಿ ತುಂಬಲು ಸಶಕ್ತವಾಗಿರುವ ರಾಜ್ಯ ಶಿಕ್ಷಣ ನೀತಿಯನ್ನು ಕರ್ನಾಟಕ ಸರಕಾರವು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಶನಿವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ಇಂದಿನ ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳನ್ನು ಹಾಗೂ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ, ನಿರ್ದಿಷ್ಟ ಕಾಲಮಿತಿಯಲ್ಲಿ ಹೇಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬಹುದು ಎಂಬುದಕ್ಕೆ ವಿವರವಾದ ಕ್ರಿಯಾಯೋಜನೆಯನ್ನು ಹೊಂದಿರುವ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತಂದರೆ ಮುಂದಿನ 10 ವರ್ಷಗಳಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರವು ಅಮೂಲಾಗ್ರವಾಗಿ ಬದಲಾಗಲಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಶಿಕ್ಷಣ ನೀತಿಯ ವರದಿ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಭಾಗಗಳಲ್ಲಿ ಭಾಷಾ ಮಾಧ್ಯಮದ ಪ್ರಶ್ನೆಯನ್ನು ಬಹಳ ಗಂಭೀರವಾಗಿ ಪರಿಶೀಲಿಸಿ, ರಾಜ್ಯಕ್ಕೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳುಳ್ಳ ದ್ವಿಭಾಷಾ ನೀತಿಯನ್ನು ಶಿಫಾರಸು ಮಾಡಿರುವುದು ಅತ್ಯಂತ ಸಮಯೋಚಿತ ಭಾಷಾ ಪ್ರಾವೀಣ್ಯತೆಯನ್ನು ಹೆಚ್ಚಿಸಲು ಮತ್ತು ಬೋಧನ ವಿಭಾಗದ ಗುಣಮಟ್ಟವನ್ನು ಉನ್ನತೀಕರಿಸಲು ಭಾಷಾ ಬೋಧನೆ ಹಾಗೂ ತರಬೇತಿ ಕೇಂದ್ರ ಮತ್ತು ಜ್ಞಾನ ಅನುವಾದ ಕೇಂದ್ರಗಳ ಸ್ಥಾಪನೆಗೆ ವರದಿಯು ಒತ್ತಾಯಿಸಿರುವುದು ಐತಿಹಾಸಿಕ ನಿಲುವು. ಸರಕಾರವು ಈ ವರದಿಯನ್ನು ಒಪ್ಪುವ ಮೂಲಕ ಭಾಷೆಯ ಬೆಳವಣಿಗೆಗೆ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ.
ದ್ವಿಭಾಷಾನೀತಿಯನ್ನು ಶಿಫಾರಸು ಮಾಡುವಾಗ ಕನ್ನಡ ಮತ್ತು ಇಂಗ್ಲಿಷ್ ತರ ಭಾಷೆಗಳನ್ನು ಕಡೆಗಣಿಸಿಲ್ಲವೆಂಬುದು ಮಹತ್ವದ ವಿಚಾರ. ಈ ವರದಿಯಂತೆ ರಾಜ್ಯ ಭಾಷೆಯಾದ ಕನ್ನಡವು ಮೊದಲನೇ ಅಥವಾ ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಉಳಿಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿಯೂ ತಾವು ಇಚ್ಛಿಸುವ ಭಾಷೆಯನ್ನು ಕಲಿಯಲು ಅವಕಾಶ ಕಲ್ಪಿಸಿರುವುದು ಇವತ್ತಿನ ಸಂಕೀರ್ಣ ಭಾಷಾ ಪರಿಸರದಲ್ಲಿ ಅನುಷ್ಠಾನ ಯೋಗ್ಯವಾಗಿದೆ ಅಭಿಪ್ರಾಯಪಟ್ಟಿದ್ದಾರೆ.
ತ್ರಿಭಾಷಾ ಸೂತ್ರ ಒಂದು ಬಗೆಯಲ್ಲಿ ಹಿಂದಿಯ ಯಜಮಾನಿಕೆಯನ್ನು ಬಲತ್ಕಾರವಾಗಿ ಹೇರುವ ಸೂತ್ರವೇ ಹೊರತು ಅರಿವಿನ ಮತ್ತು ಶೈಕ್ಷಣಿಕ ಸಾಮಥ್ರ್ಯವನ್ನು ಉತ್ತಮಗೊಳಿಸಲು ಯಾವುದೇ ಸಹಾಯವಾಗಿಲ್ಲ ಎಂಬುದನ್ನು ಸಂಶೋಧನೆಗಳೇ ದೃಢಪಡಿಸಿವೆ. ಸಂವಿಧಾನವು ಒಪ್ಪಿರುವ ಎಲ್ಲ 22 ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿದ್ದು, ಸಮಾನತೆಯನ್ನು ಸಾಧಿಸುವ ದಾರಿಯಲ್ಲಿ ಹಿಂದಿಯ ಯಜಮಾನಿಕೆಯನ್ನು ರಾಜ್ಯ ಶಿಕ್ಷಣ ನೀತಿ ಸ್ಪಷ್ಟವಾಗಿ ನಿರಾಕರಿಸಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ರಾಜ್ಯ ಶಿಕ್ಷಣ ನೀತಿ ಆಯೋಗವು ಡಾ.ಸಂಜಯ ಕೌಲ್, ಡಾ.ರಾಜೇಂದ್ರ ಚೆನ್ನಿ, ಡಾ, ನಟರಾಜ ಬೂದಾಳು, ಡಾ. ಎ.ನಾರಾಯಣ, ಡಾ.ವಿನಯಾ ಒಕ್ಕುಂದ, ಡಾ.ಸಂತೋಷ್ ನಾಯಕ್, ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಡಾ.ವಿ.ಪಿ.ನಿರಂಜನಾರಾಧ್ಯ ಮೊದಲಾದ ಶಿಕ್ಷಣ ತಜ್ಞರನ್ನು ಒಳಗೊಂಡಿದ್ದು, ಈ ಸಮಿತಿ 2 ವರ್ಷಗಳಲ್ಲಿ 130ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ಎಚ್ಚರಿಕೆಯಿಂದ ದತ್ತಾಂಶಗಳೊಂದಿಗೆ ವಿಶ್ಲೇಷಿಸಿ ಮಹತ್ವದ ವರದಿಯನ್ನು ಸಿದ್ಧಪಡಿಸಿರುವುದು, ಇಡೀ ದೇಶಕ್ಕೆ ಮಾದರಿಯಾಗಿದೆ. ಅತ್ಯಂತ ಪ್ರಜಾಸತ್ತಾತ್ಮಕವಾದ ವರದಿಯು ಪೂರ್ಣಮಟ್ಟದಲ್ಲಿ ಜಾರಿಗೆ ಬರುವುದು ರಾಜ್ಯದ ಶಿಕ್ಷಣ ಕ್ಷೇತ್ರದ ಹಿತದೃಷ್ಟಿಯಿಂದ ಪ್ರಮುಖ ಎಂದು ತಿಳಿಸಿದ್ದಾರೆ.