×
Ad

ಪ್ರಾಮಾಣಿಕ ಹೋರಾಟಗಾರ ಮೈಕೆಲ್ ಫರ್ನಾಂಡಿಸ್‌ : ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

Update: 2025-08-19 22:44 IST

ಬೆಂಗಳೂರು ಆ.19: ಅತ್ಯಂತ ಸರಳ, ಸಜ್ಜನಿಕೆಯ ಪ್ರಾಮಾಣಿಕ ಹೋರಾಟಗಾರ ಮಾಜಿ ಶಾಸಕ ಮೈಕೆಲ್ ಫರ್ನಾಂಡಿಸ್‌ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಕೊಂಡಜ್ಜಿ ಸಭಾಂಗಣದಲ್ಲಿ ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್ ಮತ್ತು ಸಂತೋಷ್‌ ಲಾಡ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಮಾಜಿ ಶಾಸಕ ಮೈಕೆಲ್ ಫರ್ನಾಂಡಿಸ್‌ರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮೈಕೆಲ್ ಮತ್ತು ಪತ್ನಿ ಡೋನಾ ಫರ್ನಾಂಡಿಸ್‌ ಅವರನ್ನು ಸನ್ಮಾನಿಸಿ ಮಾತನಾಡಿದರು.

ಬಹಳಷ್ಟು ಜನ ಸಮಾಜವಾದಿ ಪಕ್ಷದಿಂದ ಬಂದಿರುತ್ತಾರೆ. ಆದರೆ ಜಾರ್ಜ್ ಫರ್ನಾಂಡೀಸ್ ಮತ್ತು ಮೈಕೆಲ್ ಫರ್ನಾಂಡೀಸ್ ಅಂತಹ ಸಮಾಜವಾದಿ ವ್ಯಕ್ತಿ ಮತ್ತು ವ್ಯಕ್ತಿತ್ವಗಳನ್ನು ನೋಡುವುದು ಅಪರೂಪ. ಶಾಸಕರಾಗಿದ್ದ ಸಮಯದಲ್ಲಿ ಅವರಿಗೆ ಕಾರ್ಮಿಕ ಸಚಿವರಾಗುವ ಅವಕಾಶ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿತ್ತು. ಆದರೆ ಅವರು ಕಾರ್ಮಿಕ ಸಚಿವರಾಗಿ ಕಾರ್ಮಿಕರ ಹಿತ ಕಾಪಾಡುವುದು ಕಷ್ಟ ಎಂದು ಸಚಿವ ಸ್ಥಾನ ತಿರಸ್ಕರಿಸಿ ಹೋರಾಟದ ಮಾರ್ಗದಲ್ಲೇ ಮುಂದುವರೆದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂತ್ರಿ ಪದವಿ ಸಿಕ್ಕಿದಾಗ ಬೇಡ ಎನ್ನವರು ತುಂಬಾ ಕಡಿಮೆ. ಆ ಬೇಡ ಎನ್ನುವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಂತವರು ಮೈಕೆಲ್ ಫರ್ನಾಂಡೀಸ್. ಇವರು ಜೀವನದುದ್ದಕ್ಕೂ ಕಾರ್ಮಿಕರ ಹಕ್ಕುಗಳಿಗಾಗಿಯೇ ಹೋರಾಡಿದವರು. 92ರ ವಯಸ್ಸಿನಲ್ಲಿಯೂ ಶುದ್ಧ ಮನಸ್ಸಿನಿಂದ ಸಾರ್ವಜನಿಕರ ಪರವಾಗಿ, ಕಾರ್ಮಿಕರ ಪರವಾಗಿ, ಜನರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಹೋರಾಟ ರಾಜಕಾರಣದಲ್ಲಿ ಅತೀ ಅಪರೂಪದ ವ್ಯಕ್ತಿತ್ವ ಮೈಕೆಲ್ ದಂಪತಿಯವರದ್ದಾಗಿದೆ ಎಂದು ಸಿದ್ದರಾಮಯ್ಯ ನುಡಿದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ಆರ್.ಪಾಟೀಲ್, ಕಾರ್ಮಿಕ ಸಚಿವ ಸಂತೋಷ್‌ ಲಾಡ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಪ್ರಾಧ್ಯಾಪಕ ಪ್ರೊ.ಬಾಬೂ ಮ್ಯಾಥ್ಯೂ, ಮೋಹನ್ ಕೊಂಡಜ್ಜಿ, ಮೈಕೆಲ್ ಬಿ.ಫರ್ನಾಂಡಿಸ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News