×
Ad

ಮುಂಬರಲಿರುವ ಚುನಾವಣೆ ವೇಳೆಗೆ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಿ : ರಾಜ್ಯ ನಾಯಕರಿಗೆ ಸುರ್ಜೇವಾಲ ಸೂಚನೆ

Update: 2025-08-23 19:53 IST

PC : PTI

ಬೆಂಗಳೂರು, ಆ.23: ಮುಂಬರಲಿರುವ ಆರು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ವೇಳೆಗೆ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ ರಾಜ್ಯದ ನಾಯಕರಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಪಕ್ಷದ ಪ್ರಮುಖ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದ ಸುರ್ಜೇವಾಲ, ಈ ಹಿಂದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಆದ ಮತಪಟ್ಟಿಯಲ್ಲಿನ ಅಕ್ರಮಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂಪೂರ್ಣವಾಗಿ ರಾಜ್ಯ ವ್ಯಾಪ್ತಿಯ ಅಧಿಕಾರಿಗಳ ಹೊಣೆಯಾಗಿದೆ. ಹೀಗಾಗಿ ಈ ಹಿಂದೆ ನಡೆದಿರುವ ಲೋಪಗಳನ್ನು ಸರಿಪಡಿಸುವ ಜೊತೆಗೆ ಕರಾರುವಾಕ್ಕಾದ ಮತದಾರರ ಪಟ್ಟಿ ಸಜ್ಜುಗೊಳ್ಳಬೇಕು. ಇದಕ್ಕೆ ಸಂಪುಟದ ಸದಸ್ಯರು ಕಾಲಕಾಲಕ್ಕೆ ನಿಗಾವಹಿಸಬೇಕು ಎಂದು ಅವರು ನೀಡಿದರು.

ಪಕ್ಷದ ಬೂತ್‍ಮಟ್ಟದ ಕಾರ್ಯಕರ್ತರು ಮತದಾರರ ಪಟ್ಟಿಯಲ್ಲಿನ ಪರಿಷ್ಕರಣೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ಹಿಂದೆ ಅಲ್ಪಸಂಖ್ಯಾತರ ಮತಗಳನ್ನು ಹಾಗೂ ಪರಿಶಿಷ್ಟರ ಮತಗಳನ್ನು ತೆಗೆದು ಹಾಕಿರುವುದು, ಅನ್ಯರಾಜ್ಯಗಳ ಮತದಾರರನ್ನು ಸೇರ್ಪಡೆ ಮಾಡಿರುವುದು, ನಕಲಿ ಮತದಾರರ ಸಂಖ್ಯೆ ಹೆಚ್ಚಿರುವುದು ವ್ಯಾಪಕವಾಗಿತ್ತು ಎಂದು ಅವರು ಉಲ್ಲೇಖಿಸಿದರು.

ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷ ನಿಷ್ಠರಿಗೆ ಆದ್ಯತೆ ನೀಡಬೇಕು. ವಲಸಿಗ ಅಭ್ಯರ್ಥಿ ಸಂಖ್ಯೆ ಶೇ.10ಕ್ಕಿಂತ ಹೆಚ್ಚಿರಬಾರದು, ಅನಿವಾರ್ಯ ಸಂದರ್ಭದಲ್ಲಿ ಅನ್ಯಪಕ್ಷಗಳಿಂದ ಬಂದವರಿಗೆ ಟಿಕೆಟ್ ನೀಡಬೇಕಾದರೆ, ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸಿ, ಒಪ್ಪಿಗೆ ಪಡೆದುಕೊಳ್ಳುವುದು ಕಡ್ಡಾಯ ಎಂದು ಸುರ್ಜೇವಾಲ ತಾಕೀತು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News