ಎಲ್ಲ ಅರ್ಹ ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ: ದಿನೇಶ್ ಗುಂಡೂರಾವ್
ಬೆಂಗಳೂರು, ಆ.23 : ಮಾಧ್ಯಮ ಸಂಜೀವಿನಿ ಯೋಜನೆಯೂ ಮಾನ್ಯತೆ ಹೊಂದಿರುವ ಪತ್ರಕರ್ತಕರಿಗೆ ಮಾತ್ರ ಸಿಗುತ್ತಿದ್ದು, ಇದನ್ನು ಎಲ್ಲ ಅರ್ಹ ಪತ್ರಕರ್ತರಿಗೂ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶನಿವಾರ ನಗರದ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ ‘ಅಮೃತ ಸಂಭ್ರಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಾಧ್ಯಮ ಸಂಜೀವಿನಿ ಯೋಜನೆಗೆ ಸಂಬಂಧಿಸಿದಂತೆ ಇರುವಂತಹ ಕಠಿಣ ಷರತ್ತುಗಳನ್ನು ಸರಳೀಕರಣ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸುವುದಾಗಿ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಸಾಲ ಮರು ಪಾವತಿ ಮಾಡದಿದ್ದರೆ, ಸಹಕಾರಿ ಸಂಘಗಳು ಉಳಿಯಲು ಸಾಧ್ಯವಿಲ್ಲ. ಆದುದರಿಂದ, ಸಹಕಾರ ಸಂಘಗಳನ್ನು ಉಳಿಸಿಕೊಳ್ಳಲು ಹಣ ಮರು ಪಾವತಿ ಕುರಿತು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ವಸೂಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಬೇಡಿಕೆಗಳು: ‘ಸಮುದಾಯ ಮಾಧ್ಯಮ ಭವನ’ ನಿರ್ಮಾಣಕ್ಕೆ ರಿಯಾಯಿತಿ ದರದಲ್ಲಿ ಸಿ.ಎ ನಿವೇಶನ ನೀಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ‘ಮಾಧ್ಯಮ ಗ್ರಾಮ’ ನಿರ್ಮಾಣಕ್ಕೆ 10 ಎಕರೆ ಜಮೀನು ಮಂಜೂರು ಮಾಡಬೇಕು. ಪತ್ರಕರ್ತರ ಪಿಂಚಣಿ ಯೋಜನೆಯ ನಿಯಮ ಸರಳೀಕರಣಗೊಳಿಸಬೇಕು. ಸಂಘದ ಉತ್ತೇಜನಕ್ಕೆ 10 ಕೋಟಿ ರೂ.ಬಡ್ಡಿ ರಹಿತ ಸಾಲ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಏಳಿಗೆಗೆ ಕೊಡುಗೆ ನೀಡಿರುವವರಿಗೆ ಸನ್ಮಾನಿಸಲಾಯಿತು. ಅಲ್ಲದೇ, ಅತಿಥಿಗಳಿಂದ ಸಂಘದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿಸಲಾಯಿತು.