×
Ad

ಸೌಜನ್ಯ ಪರ ಹೋರಾಟ ನಡೆಯುವಾಗ ಬಿಜೆಪಿ ನಾಯಕರು ಎಲ್ಲಿದ್ದರು ? : ಎನ್‌.ಚಲುವರಾಯಸ್ವಾಮಿ

Update: 2025-08-24 23:35 IST

ಮಂಡ್ಯ, ಆ.24: ಧರ್ಮಸ್ಥಳದ ವಿರುದ್ಧ ಹತ್ತಾರು ವರ್ಷಗಳಿಂದ ಸೌಜನ್ಯ ಪರ ಹೋರಾಟ ನಡೆಯುವಾಗ ಇವರೆಲ್ಲ ಎಲ್ಲಿ ಹೋಗಿದ್ದರು? ಇವರದೇ ಸರಕಾರವಿತ್ತಲ್ಲಾ ಏಕೆ ಕ್ರಮವಾಗಲಿಲ್ಲ? ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ರವಿವಾರ ಮಾಧ್ಯಮಗಳಿಗೆ ಪ್ರತಿಕ್ರಿಸಿದ ಅವರು, ಧರ್ಮಸ್ಥಳದ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ವಿಜಯೇಂದ್ರ, ಆ‌ರ್.ಅಶೋಕ್, ಇತರ ನಾಯಕರು ಈಗ ಮಾತನಾಡುತ್ತಿದ್ದಾರೆ. ಆಗ ಏಕೆ ಸುಮ್ಮನಿದ್ದರು? ಎಂದು ಪ್ರಶ್ನಿಸಿದರು.

ಸೌಜನ್ಯ ಮೃತಪಟ್ಟಾಗ ಆ‌ರ್.ಅಶೋಕ್‌ ಗೃಹ ಸಚಿವರಾಗಿದ್ದರು. ಅಂದೇ ಸೂಕ್ತ ತನಿಖೆ ಮಾಡಬಹುದಿತ್ತು. ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದು ಮಹಾ ಅಪರಾಧ. ಇದೀಗ ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರಿಗೆ ದೊಡ್ಡ ಮುಖಭಂಗ ಆಗಿದೆ ಎಂದು ಅವರು ಟೀಕಿಸಿದರು.

ಎಸ್ಐಟಿ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮ್ಮ ಸರಕಾರ ತಪ್ಪು ಮಾಡಿದ ಯಾರನ್ನೂ ಬಿಡುವುದಿಲ್ಲ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಆಗುತ್ತದೆ. ಎಸ್‌ಐಟಿ ರಚನೆ ಮಾಡಿದಾಗ ಬಾಯಿಮುಚ್ಚಿಕೊಂಡು ಸುಮ್ಮನಿದ್ದ ಬಿಜೆಪಿಯವರು ಈಗ ರಾಜಕೀಯ ಲಾಭ ಪಡೆಯೋಕೆ ನೋಡ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ನಾವು ಕೂಡ ಹಿಂದುಗಳೇ. ಧರ್ಮಸ್ಥಳದ ಬಗ್ಗೆ ನಮಗೂ ಅಪಾರ ಗೌರವ ಇದೆ. ಆದರೆ, ಬಿಜೆಪಿಯವರ ರೀತಿ ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವುದಿಲ್ಲ. ಸಂವಿಧಾನದ ಪ್ರಕಾರ ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಎಸ್‌ಐಟಿ ಮೂಲಕ ನಮ್ಮ ಸರಕಾರ ಸತ್ಯವನ್ನು ಹೊರಗೆ ತಂದಿದೆ. ಇನ್ನು ಮುಂದೆಯಾದರೂ ಬಿಜೆಪಿಯವರು ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡೋದನ್ನು ಬಿಡಲಿ ಎಂದು ಅವರು ಸಲಹೆ ನೀಡಿದರು.

ಸಂದರ್ಭ ಬಂದಾಗ ಡಿಕೆಶಿಯವರೂ ಸಿಎಂ ಆಗುತ್ತಾರೆ :

ಡಿ.ಕೆ.ಶಿವಕುಮಾ‌ರ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಡಿ.ಕೆ.ಶಿವಕುಮಾರ್ ಬಿಜೆಪಿಗೆ ಹೋಗುವುದಾಗಿದ್ದರೆ ಎಂದೋ ಹೋಗಿರುತ್ತಿದ್ದರು. ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ಉತ್ತಮ ಕೆಪಿಸಿಸಿ ಅಧ್ಯಕ್ಷರು ಅಂತ ಹೆಸರು ಪಡೆದಿದ್ದಾರೆ. ಅವರೇಕೆ ಈಗ ಬಿಜೆಪಿಗೆ ಹೋಗುತ್ತಾರೆ? ಸಂದರ್ಭ ಬಂದಾಗ ಅವರೂ ಸಿಎಂ ಆಗುತ್ತಾರೆ. ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಬಿಜೆಪಿಯವರಿಗೆ ಮತ್ತು ಮಾಧ್ಯಮದವರಿಗೆ ಅದರ ಉಸಾಬರಿ ಏಕೆ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News