×
Ad

ಸಮುದಾಯ ಸಂಘಟನೆ ಸೈದ್ಧಾಂತಿಕ ಸಂಚಲನವುಂಟು ಮಾಡಿದೆ: ಪ್ರೊ.ಬರಗೂರು ರಾಮಚಂದ್ರಪ್ಪ

Update: 2025-08-24 23:46 IST

ಬೆಂಗಳೂರು, ಆ.24: ‘ರೋಚಕತೆ, ರೋಮಾಂಚನ ಉಂಟು ಮಾಡುತ್ತಿದ್ದ ಕಾಲದಲ್ಲಿ ಸೈದ್ಧಾಂತಿಕ ಸಂಚಲನವನ್ನು ಉಂಟು ಮಾಡಿದ ಹೆಮ್ಮೆ ‘ಸಮುದಾಯ ಸಂಘಟನೆ’ಯದ್ದು ಎಂದು ಹಿರಿಯ ಸಾಹಿತಿ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗಮಂದಿರದಲ್ಲಿ ನಡೆದ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸುವರ್ಣ ಉತ್ಸವ ಹಾಗೂ ಮನುಷ್ಯತ್ವದೆಡೆಗೆ ‘ಸಮುದಾಯ ಜಾಥಾ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಆದ್ಯತೆಗಳು ಪಲ್ಲಟವಾಗುತ್ತಿರುವ ಕಾಲ, ಸಂಘಟನೆಗಳು ವಿಘಟನೆಗೊಂಡಿರುವ ಕಾಲ. ಇಂತಹ ಸಂದರ್ಭದಲ್ಲಿ ಸಮುದಾಯ ಸಂಘಟನೆ ಏಳು-ಬೀಳುಗಳನ್ನು ಕಂಡರೂ ಸ್ಪಷ್ಟ ಸೈದ್ಧಾಂತಿಕತೆಯನ್ನು ಕಾಪಾಡಿಕೊಂಡಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಸಾಮಾಜಿಕ ಶ್ರೇಣೀಕರಣ, ಧಾರ್ಮಿಕ ಧೃವೀಕರಣ ಹಾಗೂ ಆರ್ಥಿಕ ಕೇಂದ್ರೀಕರಣದ ಕಾಲ. ಮಾನವೀಯತೆಯ ಜಾಗದಲ್ಲಿ ಮತೀಯತೆ ಆಕ್ರಮಿಸಿಕೊಂಡಿದೆ. ಮನುಷ್ಯತ್ವದ ಮೌಲ್ಯದ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮನುಷ್ಯತ್ವದ ಕಣ್ಣುಗಳಾದ ಸೌಹಾರ್ದ ಹಾಗೂ ಸಮಾನತೆಯನ್ನು ಕಾಪಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ಮಾತನಾಡಿ, ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಸಮುದಾಯದ ಪಾತ್ರ ಮಹತ್ವವಾಗಿದೆ. ನಮ್ಮ ರಾಜ್ಯದಲ್ಲಿ ಸೌಹಾರ್ದ ವಾತಾವರಣ ನೆಲೆಸುವ ನಿಟ್ಟಿನಲ್ಲಿ ಸಮುದಾಯ ಕೊಟ್ಟ ಕೊಡುಗೆ ಅಪಾರ. ಇಂತಹ ಸಾಂಸ್ಕೃತಿಕ ಎಚ್ಚರದ ಸಂಘಟನೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಜಗತ್ತಿನ ಎಲ್ಲ ಜನರ ಮೇಲೆ ಸಂಘಟನಾತ್ಮಕ ಶೋಷಣೆ ಪ್ರಾರಂಭವಾಗಿದೆ. ಬಹುಪಾಲು ದೇಶದಲ್ಲಿ ರಾಜಕೀಯ ಅಭದ್ರತೆ ಕಾಣುತ್ತಿದೆ. ಎಐ ಸೇರಿದಂತೆ ಮಾಹಿತಿ ತಂತ್ರಜ್ಞಾನದ ಬದಲಾವಣೆಗಳು, ಸಾರಿಗೆ ಕ್ಷೇತ್ರದಲ್ಲಿ ಆದ ಬದಲಾವಣೆಗಳಿಂದ ಸಂಬಂಧಗಳಲ್ಲಿಯೂ ಬದಲಾವಣೆಯಾಗುತ್ತಿದೆ ಎಂದರು.

1975ರಲ್ಲಿ ಘೋಷಿತ ತುರ್ತುಪರಿಸ್ಥಿತಿ ಇತ್ತು. ಇವತ್ತು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಅವತ್ತು ಸಂವಿಧಾನಕ್ಕೆ ಜನವಿರೋಧಿ ತಿದ್ದುಪಡಿ ತರುತ್ತಿದ್ದರು. ಆದರೆ ಇವತ್ತು ಸಂವಿಧಾನವನ್ನು ಅಪ ವ್ಯಾಖ್ಯಾನ ಮಾಡುತ್ತಿದ್ದಾರೆ. ಸಂವಿಧಾನ ಮತ್ತು ಡಾ.ಅಂಬೇಡ್ಕರ್ ಅವರಿಗೆ ನಮಸ್ಕರಿಸಿ ಬೆನ್ನ ಹಿಂದೆ ಚೂರಿ ಹಾಕುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ರಂಗಕರ್ಮಿ ಪ್ರಸನ್ನ, ವಿಜಯಮ್ಮ, ಸಿ.ವೀರಣ್ಣ ಮುಂತಾದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ಅಗ್ರಹಾರ ಕೃಷ್ಣಮೂರ್ತಿ, ಸಮುದಾಯದ ರಾಜ್ಯ ಸಮಿತಿ ಅಧ್ಯಕ್ಷ ಎಚ್. ಜನಾರ್ಧನ, ಕಾರ್ಯದರ್ಶಿ ಶಶಿಧರ ಕುಮಾರ್, ಸಿ.ಕೆ.ಗುಂಡಣ್ಣ, ಹಿರಿಯ ಲೇಖಕಿ ಡಾ.ಬಂಜಗೆರೆ ಜಯಪ್ರಕಾಶ್, ರವೀಂದ್ರನಾಥ ಸಿರಿವರ, ಬಿ.ಆರ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News