ಎಫ್‍ಕೆಸಿಸಿಐನಿಂದ ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರು ಸೆ.2: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಸುಂಕ ಹೇರಿಕೆಯಿಂದಾಗಿ ಜವಳಿ, ಇಂಜಿನಿಯರಿಂಗ್ ಸರಕುಗಳು ಮತ್ತು ಐಟಿ-ಆಧಾರಿತ ಸೇವೆಗಳಂತಹ ವಲಯಗಳ ಮೇಲೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರಕಾರವು ಪ್ರೋತ್ಸಾಹ ಅಥವಾ ಪರಿಹಾರ ಕ್ರಮಗಳನ್ನು ಘೋಷಿಸುತ್ತದೆಂಬ ಭರವಸೆಯಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ನಗರದ ಎಫ್‍ಕೆಸಿಸಿಐನ ಸರ್ ಎಂ.ವಿ. ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ(ಎಫ್‍ಕೆಸಿಸಿಐ) ಆಯೋಜಿಸಿದ್ದ ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಸಾಧ್ಯವಿರುವ ಎಲ್ಲ ಬೆಂಬಲವನ್ನು ಈ ವಲಯಗಳಿಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದರು.
ಭಾರತದ ರಫ್ತು ಯಶಸ್ಸಿಗೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ರಾಜ್ಯದ ಸಾಮಥ್ರ್ಯಗಳು ಐಟಿ, ಏರೋಸ್ಪೇಸ್, ಜೈವಿಕ ತಂತ್ರಜ್ಞಾನ, ಕಾಫಿ, ಜವಳಿ ಮತ್ತು ಉತ್ಪಾದನೆ ವಲಯಗಳಲ್ಲಿವೆ. 2024-25ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು 159 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ರಫ್ತುಗಳನ್ನು ದಾಖಲಿಸಿದ್ದು, ರಾಷ್ಟ್ರೀಯವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಫ್ತು ಎಂದರೆ ಕೇವಲ ವಿದೇಶಿ ವಿನಿಮಯ ಗಳಿಕೆಯ ಬಗ್ಗೆ ಅಲ್ಲ; ಅವು ಉದ್ಯೋಗ ಸೃಷ್ಟಿ, ಸ್ಪರ್ಧಾತ್ಮಕತೆ ಮತ್ತು ಭಾರತದ ಜಾಗತಿಕ ಸ್ಥಾನೀಕರಣದ ಬಗ್ಗೆಯಾಗಿದೆ. ಕರ್ನಾಟಕವು ರಫ್ತಿನಲ್ಲಿ ತನ್ನದೇ ಆದ ಕೊಡುಗೆ ನೀಡುತ್ತದೆ. ರಾಜ್ಯ ಸರಕಾರವು ರಫ್ತು ಪ್ರಗತಿಯಲ್ಲಿ ಬದ್ಧ ಪಾಲುದಾರನಾಗಿ ಉಳಿದಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯದಲ್ಲಿ ಹಣಕಾಸಿನ ಶಿಸ್ತನ್ನು ದುರ್ಬಲಗೊಳಿಸುವ ಬದಲು, ಆರ್ಥಿಕತೆಗೆ 96,000 ಕೋಟಿ ರೂಪಾಯಿಗೂ ಹೆಚ್ಚು ಹಣ ಖಾತರಿ ಯೋಜನೆಗಳಿಂದ ಸೇರ್ಪಡೆಯಾಗಿದೆ, ಜಿಎಸ್‍ಟಿ ಸಂಗ್ರಹ ಹೆಚ್ಚಳವಾಗಿದೆ. ಮಹಿಳಾ ಕಾರ್ಯಪಡೆಯ ಭಾಗವಹಿಸುವಿಕೆ ಕೂಡ ಶೇ.23ರಷ್ಟು ಹೆಚ್ಚಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸಾರಿಗೆ ಮೂಲಸೌಕರ್ಯವನ್ನು ಆಧುನೀಕರಿಸಲು, ಹೆದ್ದಾರಿಗಳನ್ನು ವಿಸ್ತರಿಸಲು, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್‍ಗಳನ್ನು ಹೆಚ್ಚಿಸಲು ಮತ್ತು ಬಂದರುಗಳಿಗೆ ರೈಲು ಸಂಪರ್ಕವನ್ನು ಬಲಪಡಿಸಲು ಕರ್ನಾಟಕದ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಎಫ್‍ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಮಾತನಾಡಿ, ಯುಎಸ್‍ನಿಂದ ಸುಂಕಗಳ ಹೇರಿಕೆಯು ನಮ್ಮ ರಫ್ತುದಾರರ ಸ್ಪರ್ಧಾತ್ಮಕತೆಗೆ ನಿಜವಾದ ಬೆದರಿಕೆಯನ್ನು ಒಡ್ಡುತ್ತದೆ. ಇದು ದೊಡ್ಡ ಕಂಪೆನಿಗಳಿಗೆ ಮಾತ್ರವಲ್ಲ, ವಿಶೇಷವಾಗಿ ಸಣ್ಣ ಲಾಭದಲ್ಲಿ ನಡೆಯುವ ಸಣ್ಣ ರಫ್ತುದಾರರಿಗೆ ಸಮಸ್ಯೆಯಾಗಿದೆ. ಸುಂಕದ ಸವಾಲನ್ನು ಎದುರಿಸಲು ಹಾಗೂ ರಫ್ತಿನ ಆವೇಗ ಹಳಿ ತಪ್ಪದಂತೆ ನೋಡಿಕೊಳ್ಳಲು ಕೇಂದ್ರ ಸರಕಾರವು ಉತ್ತೇಜಕ ಪ್ಯಾಕೇಜ್ ಅಥವಾ ಪರಿಹಾರ ಕ್ರಮಗಳೊಂದಿಗೆ ಹೆಜ್ಜೆ ಹಾಕುವಂತೆ ಎಫ್‍ಕೆಸಿಸಿಐ ಒತ್ತಾಯಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಅವರು 40 ಮಂದಿ ಅತ್ಯುತ್ತಮ ರಫ್ತುದಾರರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಐ ಚುನಾಯಿತ ಅಧ್ಯಕ್ಷೆ ಉಮಾರೆಡ್ಡಿ, ಚುನಾಯಿತ ಉಪಾಧ್ಯಕ್ಷ ಟಿ.ಸಾಯಿರಾಮ್ ಪ್ರಸಾದ್, ನಿಕಟಪೂರ್ವ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮತ್ತು ಪ್ರಶಸ್ತಿ ಸಮಿತಿಯ ಅಧ್ಯಕ್ಷ ತಿಪ್ಪೇಶಪ್ಪ ಸಹಿತ ಇತರರು ಉಪಸ್ಥಿತರಿದ್ದರು.