ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಮನೆಗೆ ಮತ್ತೆ ಈಡಿ ದಾಳಿ
ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಸ್ತುತ ಜಾರಿ ನಿರ್ದೇಶನಾಲಯ(ಈ.ಡಿ.) ವಶದಲ್ಲಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಮನೆಗಳ ಮೇಲೆ ಮತ್ತೆ ದಾಳಿ ನಡೆಸಲಾಗಿದೆ.
ಬೆಂಗಳೂರು, ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿರುವ ಸಹೋದರರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಈ.ಡಿ. ಅಧಿಕಾರಿಗಳು ಪ್ರಕರಣ ಸಂಬಂಧ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ವೀರೇಂದ್ರ ಪಪ್ಪಿಗೆ ಸೇರಿರುವ ಬೆಲೆ ಬಾಳುವ ನಾಲ್ಕು ಐಷರಾಮಿ ಕಾರುಗಳ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆಂದು ತಿಳಿದುಬಂದಿದೆ.
ಸಿಐಎಸ್‍ಎಫ್ ಭದ್ರತೆಯೊಂದಿಗೆ ಏಕಕಾಲಕ್ಕೆ ಎರಡು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಕೋಟ್ಯಂತರ ರೂ. ಬೆಲೆ ಬಾಳುವ ಕಾರುಗಳು ಎಲ್ಲಿಂದ ಬಂದಿದ್ದವು, ಯಾವ ವರ್ಷದಲ್ಲಿ ಖರೀದಿಸಲಾಗಿತ್ತು, ತೆರಿಗೆ ಕಟ್ಟಲಾಗಿತ್ತೆ ಎಂಬುದರ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಮೂಲಗಳ ಪ್ರಕಾರ ಪ್ರಸ್ತುತ ಈ.ಡಿ ವಶದಲ್ಲಿರುವ ಈ ನಾಲ್ಕು ಕಾರುಗಳನ್ನು ಯಾವುದೇ ಕ್ಷಣದಲ್ಲಿ ಜಪ್ತಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆ.22ರಂದು ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಗೋವಾ, ಜೋಧ್‌ಪುರ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ವೀರೇಂದ್ರ ಪಪ್ಪಿಗೆ ಸೇರಿದ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.
ವೀರೇಂದ್ರ ಪಪ್ಪಿ ಅವರ ಸಹೋದರ ಕೆ.ಸಿ. ನಾಗರಾಜ್ ಮತ್ತು ಅವರ ಮಗ ಪೃಥ್ವಿ.ಎನ್ ರಾಜ್ ಅವರ ಮನೆಗಳಿಂದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಸಹಚರರಾದ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಮತ್ತು ಪೃಥ್ವಿ ಎನ್.ರಾಜ್ ಅವರು ದುಬೈಯಿಂದ ಆನ್‌ಲೈನ್ ಗೇಮಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.