ಸಮೀಕ್ಷೆಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಲು ಆಗ್ರಹ
ಬೆಂಗಳೂರು, ಸೆ.11: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಎಲ್ಲ ಲಿಂಗಾಯತ ಸಮುದಾಯದವರು ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಸಬೇಕು ಎಂದು ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಮಾದಾರ್ ತಿಳಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮದಲ್ಲಿ 101 ಜಾತಿಗಳಿದ್ದು ಅದರಲ್ಲಿ ವೀರಶೈವವೂ ಒಂದು ಜಾತಿ. ಲಿಂಗಾಯತದಲ್ಲಿ ವೀರಶೈವ ಇದೆ, ವೀರಶೈವದಲ್ಲಿ ಲಿಂಗಾಯತ ಇಲ್ಲ. ಧರ್ಮವು ಜಾತಿಗಿಂತ ದೊಡ್ಡದು. ಅದಕ್ಕಾಗಿ ‘ವೀರಶೈವ ಲಿಂಗಾಯತ’ ಎಂಬುದನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ವಿವರಿಸಿದರು.
2002ರಲ್ಲಿ ಎಲ್ಲ ಲಿಂಗಾಯತರು ಮತ್ತು ವೀರಶೈವರನ್ನು ವೀರಶೈವ ಲಿಂಗಾಯತ ಎಂದು ಪರಿಗಣಿಸಲು ರಾಜ್ಯ ಸರಕಾರದ ಆದೇಶವಾಗಿದ್ದು, ಇದು ಸಂಪೂರ್ಣ ತಪ್ಪಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಆದೇಶ ಪುನರ್ ಪರಿಶೀಲನೆ ನಡೆಸಲು ಹೈಕೋರ್ಟ್ ಆದೇಶಿಸಿದ್ದರೂ ಸರಕಾರ ತಪ್ಪನ್ನು ಸರಿಪಡಿಸಿಲ್ಲ. ಈ ನಿರ್ಲಕ್ಷ್ಯ ಪ್ರಶ್ನಿಸಿ ಹಲವು ಲಿಂಗಾಯತರು ರಿಟ್ ಪಿಟಿಷನ್ ಸಲ್ಲಿಸಿದ್ದು ಒಂದೆರಡು ತಿಂಗಳಲ್ಲಿ ಆದೇಶ ಬರಲಿದೆ ಎಂದು ಅವರು ಮಾಹಿತಿ ನೀಡಿದರು.
ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದ ಭೀಮಣ್ಣ ಖಂಡ್ರೆ ಮತ್ತು ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಕಾರ್ಯದಿಂದಾಗಿ ಎಲ್ಲರನ್ನೂ ವೀರಶೈವ ಲಿಂಗಾಯತ ಎಂದು ಕರೆಯುವ ಸಮಸ್ಯೆ ಸೃಷ್ಟಿಯಾಯಿತು. ರಂಭಾಪುರಿ ಶ್ರೀಗಳ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದಿದೆ. ವೀರಶೈವ ಮಹಾಸಭಾ ಪದಾಧಿಕಾರಿಗಳಾದ ಸಚಿವ ಈಶ್ವರ ಖಂಡ್ರೆ, ಶಂಕರ ಬಿದರಿ, ರೇಣುಕಾ ಪ್ರಸನ್ನ ಸೇರಿದಂತೆ ಎಲ್ಲರ ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ಎಂದು ಮಾತ್ರ ಇದೆ ಎಂದು ತಿಳಿಸಿದರು.