×
Ad

ಬೆಂಗಳೂರು ಬಳಿ ಕೈಗಾರಿಕಾ ಅನಿಲ ತಯಾರಿಕಾ ಘಟಕ; ಜಪಾನಿನ ಏರ್ ವಾಟರ್ ಒಲವು

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜಪಾನ್ ಭೇಟಿ

Update: 2025-09-11 23:11 IST

ಬೆಂಗಳೂರು, ಸೆ. 11: ‘ಕೈಗಾರಿಕೆಗಳಲ್ಲಿ ಬಳಸುವ ಅನಿಲ ತಯಾರಿಸುವ ಜಪಾನಿನ ಬಹುರಾಷ್ಟ್ರೀಯ ಕಂಪೆನಿ ಏರ್ ವಾಟರ್, ಬೆಂಗಳೂರು ಸಮೀಪ ತನ್ನ ಎರಡನೆ ಘಟಕ ಸ್ಥಾಪಿಸಲು ಮುಂದೆ ಬಂದಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ತಿಳಿಸಿದ್ದಾರೆ.

ಗುರುವಾರ ಉನ್ನತ ಮಟ್ಟದ ನಿಯೋಗದ ಜೊತೆ ಜಪಾನ್‍ಗೆ ಭೇಟಿ ನೀಡಿರುವ ಸಚಿವ ಎಂ.ಬಿ.ಪಾಟೀಲ್ ಅವರು, ಏರ್ ವಾಟರ್ ಕಂಪೆನಿಯ ಉನ್ನತ ಅಧಿಕಾರಿಗಳ ಜೊತೆಗೆ ನಡೆಸಿದ ಸಮಾಲೋಚನೆಯಲ್ಲಿ ಕಂಪೆನಿಯು ಈ ಮಾಹಿತಿ ಹಂಚಿಕೊಂಡಿದೆ. ಕಂಪೆನಿಯ ಮೊದಲ ಘಟಕವು ಈಗಾಗಲೇ ವಿಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಗಣಿ, ಕಬ್ಬಿಣ ತಿರುಳಿನಂತಹ ಕಚ್ಚಾ ಪದಾರ್ಥಗಳನ್ನು ಬಳಸಿ ಕರ್ನಾಟಕದಲ್ಲಿ ಜೈವಿಕ ಅನಿಲ ತಯಾರಿಕಾ ಘಟಕ ಸ್ಥಾಪಿಸುವುದಕ್ಕೂ ಕಂಪೆನಿಯು ಒಲವು ತೋರಿದೆ. ಈ ಘಟಕದ ನೆರವಿನಿಂದ ಜೈವಿಕ ಅನಿಲದ ಸ್ಥಳೀಯ ಬೇಡಿಕೆ ಪೂರೈಸಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ತನ್ನ ವಹಿವಾಟಿನಲ್ಲಿ ಕರ್ನಾಟಕವು ಪ್ರಮುಖ ಆದ್ಯತಾ ವಲಯವಾಗಿರುವುದರ ಮಾಹಿತಿಯನ್ನು ಕಂಪನಿಯು ನಿಯೋಗದ ಜೊತೆ ಹಂಚಿಕೊಂಡಿದೆ. ಭಾರತವನ್ನು ತನ್ನ ವಹಿವಾಟಿನ ಎರಡನೆ ನೆಲೆಯನ್ನಾಗಿ ಕಾರ್ಪೊರೇಟ್ ಘೋಷಣೆ ಅಳವಡಿಸಿಕೊಂಡಿರುವ-ಕೈಗಾರಿಕಾ ಸೇವೆಗಳು ಮತ್ತು ಎಂಜಿನಿಯರಿಂಗ್ ಕಂಪೆನಿ ಕೊನೊಇಕೆ ಜೊತೆಗಿನ ಮಾತುಕತೆಯಲ್ಲಿ, ಜಂಟಿ ಪಾಲುದಾರಿಕೆ ಆಧಾರಿತ ಬೆಳವಣಿಗೆ ಅವಕಾಶಗಳನ್ನು ರಾಜ್ಯದ ನಿಯೋಗವು ವಿವರವಾಗಿ ಚರ್ಚಿಸಿದೆ.

ಪಾಲುದಾರಿಕೆಯಡಿ ಕೈಗಾರಿಕಾ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಪಾಲುದಾರರ ಹುಡುಕಾಟದಲ್ಲಿ ಇರುವುದಾಗಿ ಕಂಪೆನಿಯು ರಾಜ್ಯದ ನಿಯೋಗದ ಗಮನಕ್ಕೆ ತಂದಿದೆ. ಸೂಕ್ತ ಪಾಲುದಾರರನ್ನು ಗುರುತಿಸಲು ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಸಚಿವ ಪಾಟೀಲ್ ಭರವಸೆ ನೀಡಿದ್ದಾರೆ.

ಶಿಂಕೊ ನೇಮ್‍ಪ್ಲೇಟ್ ಕಂಪೆನಿಯು, 100 ಕೋಟಿ ರೂ. ವೆಚ್ಚದಲ್ಲಿ ವಾಹನಗಳಲ್ಲಿ ಬಳಸುವ ಅಲಂಕಾರಿಕ ಪ್ಲಾಸ್ಟಿಕ್ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಬೆಂಗಳೂರು ಬಳಿ ಆರಂಭಿಸುವುದಾಗಿ ತಿಳಿಸಿದೆ. ಟೊಯೋಟ ಗ್ರೂಪ್‍ನ ಕ್ಯಾಟಲರ್ ಕಂಪೆನಿಯು ಬಿಡದಿಯಲ್ಲಿನ ತನ್ನ ತಯಾರಿಕಾ ಚಟುವಟಿಕೆಯನ್ನು 140 ಕೋಟಿ ರೂ. ಹೆಚ್ಚುವರಿ ಹೂಡಿಕೆ ಮೂಲಕ 2030ರ ವೇಳೆಗೆ ವಿಸ್ತರಿಸುವುದಾಗಿ ತಿಳಿಸಿದೆ.

ಸುಧಾರಿತ ಸ್ವಯಂಚಾಲಿತ ನಿಯಂತ್ರಣ ಸಾಧನ ತಯಾರಿಸುವ ಸಗಿನೋಮಿಯಾ, ಕರ್ನಾಟಕದಲ್ಲಿ ಹೊಸ ಘಟಕ ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ. ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News