ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವುದು ಹಾಸ್ಯಾಸ್ಪದ : ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ
ಬೆಂಗಳೂರು, ಸೆ.11: ‘ರಾಜ್ಯ ಸರಕಾರ ದಸರಾ ಉತ್ಸವ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿರುವುದು ಹಾಸ್ಯಾಸ್ಪದ’ ಎಂದು ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ ಒಕ್ಕೂಟ ಲೇವಡಿ ಮಾಡಿದೆ.
ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯರಾದ ಡಾ.ಅಕ್ಕೈ ಪದ್ಮಶಾಲಿ, ಡಾ.ವಸುಂದರಾ ಭೂಪತಿ, ಡಾ.ಸುನಂದಮ್ಮ, ಡಾ.ಆರ್.ಪೂರ್ಣಿಮಾ, ಡಾ.ಎನ್.ಗಾಯತ್ರಿ, ಗೌರಮ್ಮ ಸೇರಿದಂತೆ ಇತರರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‍ರನ್ನು ಆಯ್ಕೆ ಮಾಡಿರುವ ರಾಜ್ಯ ಸರಕಾರದ ನಡೆ ನಮಗೆ ಸಂತೋಷ ತಂದಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ಸರಕಾರದ ಈ ನಡೆ ಮಹಿಳೆಯರ ಘನತೆಯನ್ನು ಹೆಚ್ಚಿಸಿದೆ. ಆದರೆ ಧಾರ್ಮಿಕ ನಂಬಿಕೆಯ ನೆಲೆಯಲ್ಲಿ ಕೋಮುವಾದಿಗಳು, ಮತೀಯ ಮೂಲಭೂತವಾದಿಗಳು ಅವರನ್ನು ವಿರೋಧಿಸುವುದು ಕೂಡಿಬಾಳುವ ನೆಲದ ಸಂಸ್ಕೃ ತಿಗೆ ಅಪಚಾರ ಎಸಗಿದಂತೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿತು.
2017ರಲ್ಲಿ ಕವಿ ನಿಸಾರ್ ಅಹಮದ್‍ರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದಾಗ ಯಾರೂ ರಾದ್ಧಾಂತ ಮಾಡಲಿಲ್ಲ. ನಮಗದು ಸಂತೋಷವೇ. ಆದರೆ, ಈಗ ಅವಕಾಶ ವಂಚಿತ ಸಮುದಾಯಕ್ಕೆ ಸೇರಿದ ಓರ್ವ ಸಮರ್ಥ ಮಹಿಳೆಯನ್ನು ನಾಡಹಬ್ಬದ ಉದ್ಘಾಟನೆಗೆ ಆಹ್ವಾನಿಸಿದಾಗ ವಿರೋಧ ಪಕ್ಷವು ವಿಚಿತ್ರ ಕುಂಟು ನೆಪಗಳನ್ನು ಹೇಳುತ್ತಾ, ಅವರ ಮೇಲೆ ದಾಳಿ ಮಾಡುತ್ತಿರುವುದು, ಅಲ್ಪಸಂಖ್ಯಾತ ಮಹಿಳಾ ವಿರೋಧಿ ನಿಲುವನ್ನು ತೋರಿಸುತ್ತದೆ ಎಂದು ಒಕ್ಕೂಟದ ಸದಸ್ಯರು ತಿಳಿಸಿದರು.
ರಾಜ್ಯದಲ್ಲಿ ನೂರಾರು ಮಹಿಳೆಯರ ಮತ್ತು ಬಾಲಕಿಯರ ಅತ್ಯಾಚಾರ-ಹತ್ಯೆ ನಡೆದಿರುವಾಗ ಅವುಗಳಿಗೆ ಕಾರಣ ಯಾರೆಂದು ಪ್ರಶ್ನಿಸುವ ಬದಲು, ನಾಡಿಗೆ ಹೆಮ್ಮೆಯನ್ನು ತಂದುಕೊಟ್ಟಿರುವ ಕನ್ನಡತಿಯನ್ನು ನಾಡ ಹಬ್ಬದ ಉದ್ಘಾಟನೆಗೆ ಆಯ್ಕೆ ಮಾಡಿರುವುದರ ವಿರುದ್ದ ಪಿಐಎಲ್ ಹೂಡಿರುವುದು ಅವರ ಬೇಜವಾಬ್ದಾರಿತನವನ್ನೂ, ಆದ್ಯತೆಯನ್ನೂ ತೋರಿಸುತ್ತದೆ. ಸಂವಿಧಾನದ ಆಶಯಗಳಿಗೆ ಬದ್ಧರಾಗಿರುವ ರಾಜ್ಯದ ಮತನಿರಪೇಕ್ಷ ಜನತೆಯೂ ಇವರ ನಡೆಯನ್ನು ಒಪ್ಪುವುದಿಲ್ಲ ಎಂದು ಒಕ್ಕೂಟ ಸದಸ್ಯರು ತಿಳಿಸಿದರು.
ಕನ್ನಡ ನಾಡು ಬಹುತ್ವದ ಬೀಡು. ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯವನ್ನು ಬೆಸೆದಿದ್ದ ಶರಣರು, ಗುರು ಗೋವಿಂದ ಭಟ್ಟರು, ಸಂತ ಶಿಶುನಾಳ ಷರೀಪರು, ಸೂಫಿಗಳು, ನಾಥ ಪಂಥೀಯರು, ದಾಸ ಪರಂಪರೆ, ಮುಂತಾದವರು ನೆಲೆಸಿದ್ದ ನಾಡು ಕನ್ನಡ ನೆಲ. ಅವುಗಳ ಬೇರುಗಳು ಇಲ್ಲಿ ಇನ್ನೂ ಆಳವಾಗಿ, ಗಟ್ಟಿಯಾಗಿವೆ. ಕೋಮುವಾದಿಗಳು ಒಡೆದಾಳುವ ನೀತಿಯನ್ನು ನಮ್ಮ ಬಹುತ್ವದ ನೆಲ ಮಾನ್ಯ ಮಾಡುವುದಿಲ್ಲ ಎಂದು ಒಕ್ಕೂಟ ಎಚ್ಚರಿಕೆ ನೀಡಿದೆ.
ಸರಕಾರ ಕೋಮುವಾದಿ ಮತ್ತು ಮೂಲಭೂತವಾದಿಗಳ ಯಾವುದೇ ಹುನ್ನಾರ, ಒತ್ತಡಗಳಿಗೂ ಮಣಿಯದೆ, ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ, ನಾಡಿನ ಜನರ ಸಹಬಾಳ್ವೆಯ ಪರಂಪರೆಯನ್ನು ಎತ್ತಿಹಿಡಿಯುವ ಸಲುವಾಗಿ ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‍ರ ಆಯ್ಕೆಯನ್ನೇ ದೃಢವಾಗಿ ಮುಂದುವರಿಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.