×
Ad

ಶಾಸಕ ವೀರೇಂದ್ರ ಅವರ ಉದ್ಯಮದಲ್ಲಿ ಅನಿಲ್ ಗೌಡ ಪಾಲುದಾರ; ಹೈಕೋರ್ಟ್‌ನಲ್ಲಿ ಈಡಿ ಪ್ರತಿಪಾದನೆ

Update: 2025-09-11 23:57 IST

ಬೆಂಗಳೂರು : ಅಕ್ರಮ ಆನ್‌ಲೈನ್‌ ಮತ್ತು ಆಫ್‌‌ಲೈನ್‌ ಬೆಟ್ಟಿಂಗ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವಿರೇಂದ್ರ ಅವರ ಉದ್ಯಮದಲ್ಲಿ ವಕೀಲ ಅನಿಲ್ ಗೌಡ ಪಾಲುದಾರರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಈಡಿ) ಹೈಕೋರ್ಟ್ ಮುಂದೆ ಬಲವಾಗಿ ಪ್ರತಿಪಾದಿಸಿದೆ.

ಈಡಿ ಸಮನ್ಸ್ ಪ್ರಶ್ನಿಸಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್‌ ಮುಖಂಡ ಹನುಮಂತರಾಯಪ್ಪ ಪುತ್ರ ಹಾಗೂ ವಕೀಲ ಅನಿಲ್ ಗೌಡ ಸಲ್ಲಿಸಿರುವ ರಿಟ್ ಅರ್ಜಿ ಕುರಿತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌ ವಾದ ಮಂಡಿಸಿ, ದುಬೈ ಸರ್ಕಾರವು ಕ್ಯಾಸಲ್‌ ರಾಕ್‌ ಪ್ರಾಜೆಕ್ಟ್‌ ಮ್ಯಾನೇಜ್ಮೆಂಟ್‌ ಸರ್ವೀಸಸ್‌ ಎಂಬ ಸಂಸ್ಥೆಗೆ ವಾಣಿಜ್ಯ ಪರವಾನಗಿ ನೀಡಿದೆ. ಈ ಕಂಪನಿಯಲ್ಲಿ ಅನಿಲ್ ಗೌಡ ಮ್ಯಾನೇಜರ್‌ ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ಐದನೇ ಹೆಸರು ಪ್ರಮುಖ ಆರೋಪಿಯಾಗಿರುವ ಶಾಸಕ ವೀರೇಂದ್ರ ಪಪ್ಪಿ ಅವರದ್ದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕ್ಯಾಸಲ್‌ ರಾಕ್‌ ಸಂಸ್ಥೆಯಲ್ಲಿ ವೀರೇಂದ್ರ ಪಪ್ಪಿ ಅವರು ಶೇ. 35 ಷೇರು, ಅನಿಲ್‌ ಗೌಡ ಶೇ. 15 ಷೇರು ಹೊಂದಿದ್ದಾರೆ. ಅನಿಲ್‌ ಗೌಡರಿಂದ ಜಪ್ತಿ ಮಾಡಿರುವ ಲ್ಯಾಪ್‌ಟಾಪ್‌ನಲ್ಲಿ ಶೇ. 5 ಲಾಭಾಂಶ ಅಂದರೆ 29 ಕೋಟಿ ರೂ. ಗಳನ್ನು ಪಡೆಯಲಾಗಿದೆ ಎಂಬ ಮಾಹಿತಿ ಇದೆ. ಅನಿಲ್‌ ಗೌಡ ಅವರು ವೀರೇಂದ್ರ ಅವರ ಜತೆ ಉದ್ಯಮ ನಡೆಸುತ್ತಿದ್ದರು ಎಂಬುದಕ್ಕೆ 2021ರ ಜುಲೈ 28ರ ಇಮೇಲ್‌ ಸಾಕ್ಷಿ ಒದಗಿಸುತ್ತದೆ. ಆ ಸಂದರ್ಭದಲ್ಲಿ ಅನಿಲ್‌ ಗೌಡ ಎಲ್‌ಎಲ್‌ಬಿ ಕಲಿಯುತ್ತಿರಬಹುದು. 2022ರಲ್ಲಿ ಅನಿಲ್‌ ಗೌಡ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದಾರೆ. ಇಂದು ಕಾನೂನಿನ ಪ್ರಕಾರ ಅನಿಲ್‌ ಗೌಡ ವಕೀಲರಾಗಿರಬಹುದು. ಆದರೆ, ಲೀಗಲ್‌ ಸರ್ವೀಸ್‌ ನೀಡಿರುವುದಕ್ಕಾಗಿ ಅನಿಲ್‌ ಗೌಡ ಅವರಿಗೆ ಸಮನ್ಸ್‌ ನೀಡಲಾಗಿಲ್ಲ. ಉದ್ಯಮದಲ್ಲಿ ಪಾಲುದಾರರಾಗಿರುವುದರಿಂದ ಅವರ ಹೇಳಿಕೆ ದಾಖಲಿಸಲು ಸಮನ್ಸ್‌ ನೀಡಲಾಗಿದೆ ಎಂದರು.

ಅನಿಲ್‌ ಗೌಡ ಪರ ವಕೀಲ ರಜತ್‌ ವಾದ ಮಂಡಿಸಿ, ಅನಿಲ್‌ ಗೌಡ ಅವರು ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲ ಎಂಬುದನ್ನು ತೋರಿಸಲು ಪೂರಕವಾದ ದಾಖಲೆ ಸಂಗ್ರಹಿಸಲಾಗುತ್ತಿದೆ. ಇವುಗಳನ್ನು ಸಲ್ಲಿಕೆ ಮಾಡಲು ಎರಡು ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಸೂಕ್ತ ದಾಖಲೆಗಳನ್ನು ಸಲ್ಲಿಸಬಹುದು. ಅವುಗಳನ್ನು ಈಡಿ ಪರ ವಕೀಲರಿಗೂ ಮುಂಚಿತವಾಗಿ ಹಂಚಿಕೆ ಮಾಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತಲ್ಲದೆ, ಅನಿಲ್‌ ಗೌಡ ವಿರುದ್ಧ ಆತುರದ ಕ್ರಮಕೈಗೊಳ್ಳಬಾರದು ಎಂದು ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News