×
Ad

ಹಾಸನ ರಸ್ತೆ ಅಪಘಾತ | ಮಾನವೀಯ ನೆಲೆಯಲ್ಲಿ ಹೆಚ್ಚಿನ ಪರಿಹಾರ ಕೊಡಿ : ಜೆಡಿಎಸ್

Update: 2025-09-14 18:12 IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ. 14: ‘ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಕೇರಳ, ಹಿಮಾಚಲ ಪ್ರದೇಶ ದುರಂತಗಳಿಗೆ ಮರಗುವ ಸಿಎಂ ಸಿದ್ದರಾಮಯ್ಯನವರೇ, ನಮ್ಮದೇ ರಾಜ್ಯದಲ್ಲಿ ಭೀಕರ ದುರಂತದಲ್ಲಿ 10 ಮಂದಿ ಯುವಕರು ಮೃತಪಟ್ಟಿದ್ದಾರೆ. ಇನ್ನಾದರೂ ಮಾನವೀಯ ನೆಲೆಯಲ್ಲಿ ಹಾಸನದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಹೆಚ್ಚಿನ ಪರಿಹಾರವನ್ನು ಘೋಷಣೆ ಮಾಡಬೇಕು’ ಎಂದು ಜಾತ್ಯತೀತ ಜನತಾ ದಳ (ಜೆಡಿಎಸ್) ಆಗ್ರಹಿಸಿದೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ‘ಹಾಸನದಲ್ಲಿ ಗಣೇಶೋತ್ಸವ ದುರಂತದಲ್ಲಿ ಮೃತಪಟ್ಟವರಿಗೆ 5ಲಕ್ಷ ರೂ.ಪರಿಹಾರ ಘೋಷಿಸಿರುವ ಸಿದ್ದರಾಮಯ್ಯನವರೇ, ಅಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ಬಹುತೇಕ ಯುವಕರು, ಬಡಕೂಲಿ ಕಾರ್ಮಿಕರ ಕುಟುಂಬದ ಮಕ್ಕಳು. ಕೂಲಿ ಮಾಡಿ ಪೋಷಕರು ಮಕ್ಕಳನ್ನು ಕಾಲೇಜಿಗೆ ಸೇರಿಸಿದ್ದರು. ಮುಂದೆ ತಂದೆ-ತಾಯಿಯನ್ನು ನೋಡಿಕೊಳ್ಳಬೇಕಿದ್ದ, ಅವರಿಗೆ ಆಸರೆಯಾಗಬೇಕಿದ್ದ ಮಕ್ಕಳ ಜೀವವೇ ಹೋಗಿದೆ. ರಾಜ್ಯ ಸರಕಾರ ಘೋಷಿಸಿರುವ 5 ಲಕ್ಷ ರೂ.ಪರಿಹಾರ ಏನೇನು ಸಾಲದು’ ಎಂದು ಆಕ್ಷೇಪಿಸಿದೆ.

‘ಆನೆ ತುಳಿತಕ್ಕೊಳಗಾಗಿ ಮೃತನಾದ ಕೇರಳದ ವ್ಯಕ್ತಿಗೆ 15 ಲಕ್ಷ ರೂ.ಪರಿಹಾರ ನೀಡಿದ್ದೀರಿ. ವಯನಾಡಿನ ದುರಂತಕ್ಕೆ ಮಿಡಿದ ನೀವು 10 ಕೋಟಿ ರೂ. ಅನುದಾನ ಘೋಷಿಸಿದ್ದೀರಿ. ಕೇರಳದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಆಡಳಿತವಿರುವ ಹಿಮಾಚಲ ಪ್ರದೇಶಕ್ಕೆ ನೆರೆ ಪರಿಹಾರವಾಗಿ 5 ಕೋಟಿ ರೂ.ಪರಿಹಾರ ಘೋಷಣೆ ಮಾಡಿದ್ದೀರಿ. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ, ರಾಜ್ಯದಲ್ಲಿ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ಪ್ರಕಟಿಸಿ’ ಎಂದು ಜೆಡಿಎಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News