×
Ad

ಮಂಡ್ಯದ ಅಬಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ : ರಾಜ್ಯಪಾಲರಿಗೆ ರೈತ ಸಂಘ ದೂರು

Update: 2025-09-14 21:12 IST

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

ಬೆಂಗಳೂರು, ಸೆ.14: ಮಂಡ್ಯದ ಅಬಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಸರಕಾರಕ್ಕೆ ಸೂಚಿಸುವಂತೆ ಕೋರಿ ರಾಜ್ಯಪಾಲರಿಗೆ, ಕರ್ನಾಟಕ ರಾಜ್ಯ ರೈತ ಸಂಘ ದೂರು ಸಲ್ಲಿಸಿದೆ.

ಮಂಡ್ಯ ಜಿಲ್ಲೆಯ ಮಂಡ್ಯ ನಗರದ ಕೇಂದ್ರ ಸ್ಥಾನದಲ್ಲಿರುವ ಅಬಕಾರಿ ಕಚೇರಿಗಳಲ್ಲಿ ಅಬಕಾರಿ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಸಿಎಂ ಮತ್ತು ಇಲಾಖೆ ಆಯುಕ್ತ ಹೆಸರಿನಲ್ಲಿ ಅಧಿಕಾರಿಗಳು, ಮದ್ಯದಂಗಡಿಗಳಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ. ಹೊಸದಾಗಿ ಹೋಟೆಲ್ ಮತ್ತು ವಸತಿ ಗೃಹ(ಸಿಎಲ್-7) ಪರವಾನಗಿ ಮಂಜೂರಾತಿ ಕೊಡಲು ಜಾತಿ ನೋಡಿ ಲಂಚ ನಿಗದಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಿಎಲ್7 ಲೈಸೆನ್ಸ್ ನೀಡಲು 60 ಲಕ್ಷ ರೂ.ಬೇಡಿಕೆ ಇಟ್ಟಿರುವ ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ ವಿರುದ್ಧ ಈಗಾಗಲೇ ಕೆಲವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಸಂಘದ ಅಧ್ಯಕ್ಷ ಈ.ಎನ್.ಕೃಷ್ಣೇಗೌಡ ಉಲ್ಲೇಖಿಸಿದ್ದಾರೆ.

ನಾಗಶಯನ ಈ ಹಿಂದೆ ಚಿತ್ರದುರ್ಗದ ಅಬಕಾರಿ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಭಾರಿ ಪ್ರಮಾಣದ ಲಂಚ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಕಾಂಗ್ರೆಸ್ ಪಕ್ಷದವರನ್ನು ಹೊರತುಪಡಿಸಿ ಬೇರೆ ಪಕ್ಷದ ಅರ್ಜಿದಾರರಿಗೆ ಲೈಸೆನ್ಸ್ ನೀಡುತ್ತಿಲ್ಲ. ಲೈಸೆನ್ಸ್‌ ಗೆ ಅರ್ಜಿ ಸಲ್ಲಿಸಿದ್ದರೆ ಜಿಲ್ಲಾ ಉಸ್ತುವಾರಿ ಮಂತ್ರಿ ಭೇಟಿ ಮಾಡುವಂತೆ ಅರ್ಜಿದಾರರಿಗೆ ಅಬಕಾರಿ ಅಧಿಕಾರಿಗಳು ಹೇಳುತ್ತಾರೆ.

ಈ ಬಗ್ಗೆ ಆಡಿಯೊ ಸಹ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ವಿಚಾರ ಬಗ್ಗೆ ಕೆ.ಆರ್.ಪೇಟೆ ತಾಲೂಕಿನ ಸುಂದರ್ ಎಂಬುವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ ಎಂದು ಕೃಷ್ಣೇಗೌಡ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News