ಬೆಂಗಳೂರಿನ ಐದು ನಗರ ಪಾಲಿಕೆ ಚುನಾವಣೆ; ಪೂರ್ವತಯಾರಿ ಸಮಿತಿ ರಚಿಸಿದ ಕೆಪಿಸಿಸಿ
ಬೆಂಗಳೂರು, ಸೆ.14: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ 5 ನಗರ ಪಾಲಿಕೆಗಳಲ್ಲಿ ಮುಂಬರುವ ದಿನಗಳಲ್ಲಿ ಚುನಾವಣೆ ನಡೆಸಲಾಗುತ್ತಿದ್ದು, ಈ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ‘ಚುನಾವಣೆ ಪೂರ್ವತಯಾರಿ ಸಮಿತಿ'ಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಚಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಸಮಿತಿಯ ಸಂಚಾಲಕರಾಗಿ ನೇಮಕವಾಗಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯ ಎಲ್ಲ ಕಾಂಗ್ರೆಸ್ ಶಾಸಕರು, 2024ರ ಲೋಕಸಭಾ ಅಭ್ಯರ್ಥಿಗಳು, ಬೆಂಗಳೂರು ನಗರದ ಎಲ್ಲ 5 ಡಿಸಿಸಿ ಅಧ್ಯಕ್ಷರು, 2023ರ ವಿಧಾನಸಭೆ ಅಭ್ಯರ್ಥಿಗಳು, ಬೆಂಗಳೂರು ನಗರ ವಿಧಾನ ಪರಿಷತ್ ಸದಸ್ಯರು, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿದ್ದಾರೆ.
ಎಐಸಿಸಿ ಸದಸ್ಯ ಸುನಿಲ್ ಕನಗೋಳ್, ಬೆಂಗಳೂರು ನಗರ ವ್ಯಾಪ್ತಿಯ ಕೆಪಿಸಿಸಿ ಉಸ್ತುವಾರಿ ಉಪಾಧ್ಯಕ್ಷರು ಹಾಗೂ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು, ಮುಂಚೂಣಿ ಘಟಕಗಳ ರಾಜ್ಯಾಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದು, ಇಂಡಿಯನ್ ಯೂತ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಸಮಿತಿಯ ಸಹ ಸಂಚಾಲಕರಾಗಿದ್ದಾರೆ.
ಸಮಿತಿಯ ಎಲ್ಲ ಸದಸ್ಯರು ಬೆಂಗಳೂರಿನ 5 ನಗರಪಾಲಿಕೆಗಳ ಚುನಾವಣೆಗೆ ಸಂಬಂಧಪಟ್ಟಂತೆ ನಗರ ವ್ಯಾಪ್ತಿಯ ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಮಾಜಿ ಮೇಯರ್‍ಗಳು, ಮಾಜಿ ಬಿಬಿಎಂಪಿ ಸದಸ್ಯರು, ಬಿಸಿಸಿ ಅಧ್ಯಕ್ಷರು ಹಾಗೂ ಇತರ ಸ್ಥಳೀಯ ಮುಖಂಡರೊಂದಿಗೆ ಸಭೆಗಳನ್ನು ಆಯೋಜಿಸಬೇಕು. ಸಭೆಯಲ್ಲಿ ಬಂದ ಮನವಿ ಅಥವಾ ಸಲಹೆಗಳನ್ನು ಕ್ರೋಡೀಕರಿಸಿ, ಅನುಷ್ಠಾನಗೊಳಿಸಬೇಕು ಎಂದು ಡಿ.ಕೆ. ಶಿವಕುಮಾರ್ ಸಮಿತಿಗೆ ಸೂಚನೆ ನೀಡಿದ್ದಾರೆ.
ಇನ್ನು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವತಯಾರಿ ಕಾರ್ಯಗಳಿಗಾಗಿ ಆ.30ರಂದು ನೇಮಕವಾದ ಸಚಿವರೊಂದಿಗೆ ಸಹಕರಿಸಲು ವಿಧಾನಪರಿಷತ್ ಸದಸ್ಯರನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಕೆ.ಆರ್.ಪುರಂ ಕ್ಷೇತ್ರಕ್ಕೆ ವಿಧಾನ ಪರಿಷತ್ತಿನ ಸದಸ್ಯ ಡಿ.ಟಿ. ಶ್ರೀನಿವಾಸ್, ಬೊಮ್ಮನಹಳ್ಳಿಗೆ ರಾಮೋಜಿಗೌಡ, ದಾಸರಹಳ್ಳಿಗೆ ಗೋವಿಂದರಾಜ್, ಚಿಕ್ಕಪೇಟೆಗೆ ನಸೀರ್ ಅಹ್ಮದ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಯಲಹಂಕಗೆ ಎಂ.ಆರ್.ಸೀತಾರಾಂ, ಸಿ.ವಿ. ರಾಮನ್ ನಗರಕ್ಕೆ ಸುಧಾಂ ದಾಸ್, ಮಲ್ಲೇಶ್ವರಂ ಕ್ಷೇತ್ರಕ್ಕೆ ರಮೇಶ್ ಬಾಬು, ಬಸವನಗುಡಿಗೆ ಯು.ಬಿ. ವೆಂಕಟೇಶ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಕ್ಕೆ ಸಲೀಂ ಅಹ್ಮದ್, ಮಹದೇವಪುರ ಕ್ಷೇತ್ರಕ್ಕೆ ನಾಗರಾಜ್ ಯಾದವ್, ಪದ್ಮನಾಭ ನಗರಕ್ಕೆ ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಎಐಸಿಸಿ ಸದಸ್ಯ ಸುನಿಲ್ ಕನಗೋಳ್ ನಗರಪಾಲಿಕೆ ಉಸ್ತುವಾರಿ ಸಚಿವರ ಸಂಯೋಜಕರಾಗಿ ನೇಮಕವಾಗಿದ್ದಾರೆ.