‘ನನ್ನ ಮತ ನನ್ನ ಹಕ್ಕು’ | ನಾಳೆ ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಬೆಂಗಳೂರು, ಸೆ.14: ‘ನನ್ನ ಮತ ನನ್ನ ಹಕ್ಕು’ ಘೋಷವಾಕ್ಯದೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಾಳೆ(ಸೆ.15) ಬೆಳಗ್ಗೆ 11ಗಂಟೆಗೆ ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ಶಾಸಕ ರಿಝ್ವಾನ್ ಅರ್ಶದ್ ವಹಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ, ಸ್ಪೀಕರ್ ಯು.ಟಿ.ಖಾದರ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮತ್ತಿತರರು ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ವಾಚನ, ಚಿತ್ರಕಲಾ, ಛಾಯಾಚಿತ್ರ ಹಾಗೂ ಚರ್ಚಾಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ಕ್ರೈಸ್ ವತಿಯಿಂದ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿಯ ನಿರುದ್ಯೋಗಿಗಳಿಗೆ ಇಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಉದ್ಯಮವನ್ನು ಸ್ಥಾಪಿಸಲು ಸಹಾಯಧನ ವಿತರಣೆ ಮಾಡಲಾಗುವುದು ಎಂದು ಇಲಾಖೆಯ ಪ್ರಕಟನೆ ತಿಳಿಸಿದೆ.