×
Ad

ದಲಿತ ಮಹಿಳೆಯರ ಬಗ್ಗೆ ಅವಹೇಳನ | ಶಾಸಕ ಸ್ಥಾನದಿಂದ ಯತ್ನಾಳ್ ವಜಾಕ್ಕೆ ಆಗ್ರಹ

Update: 2025-09-18 22:41 IST

ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು, ಸೆ.18: ದಲಿತ ಮಹಿಳೆಯರ ಬಗ್ಗೆ ಅವಹೇಳನ ಮಾಡಿ, ಅಸ್ಪೃಶ್ಯತೆ ಆಚರಿಸಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಕೂಡಲೆ ಶಾಸಕ ಸ್ಥಾನದಿಂದ ವಜಾಗೊಳಿಸಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಿಪಿಐಎಂಎಲ್ (ಲಿಬರೇಷನ್) ಆಗ್ರಹಿಸಿದೆ.

ಗುರುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ‘ಚಾಮುಂಡೇಶ್ವರಿಗೆ ಹೂವು ಹಾಕಲು ಸನಾತನಿಗಳೇ ಆಗಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ’ ಎಂದು ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಲ್ಲದೇ, ಮಾಧ್ಯಮದಲ್ಲಿ ಅಸ್ಪೃಶ್ಯತೆ ಆಚರಣೆಗೆ ಕರೆ ನೀಡಿ, ದಲಿತ ಸಮುದಾಯವನ್ನು ಅವಮಾನಿಸಿ, ಜಾತಿ ನಿಂದನೆ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿದ್ದುಕೊಂಡು ನಾಚಿಕೆಗೇಡಿತನದಿಂದ ವರ್ತಿಸಿರುವುದು ಖಂಡನಾರ್ಹವಾಗಿದ್ದು, ಶಿಕ್ಷಾರ್ಹ ಅಪರಾಧ ಎಂದು ಹೇಳಿದ್ದಾರೆ.

ಜಾತಿಗಳ ನಡುವೆ, ಧರ್ಮಗಳ ನಡುವೆ ದ್ವೇಷ ಹರಡಿಸುವುದನ್ನೇ ಕೆಲಸವನ್ನಾಗಿಸಿಕೊಂಡಿರುವ ಯತ್ನಾಳ್, ಎರಡು ಮೂರು ತಿಂಗಳಲ್ಲಿ ಹತ್ತಾರು ಕಡೆ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿಸಿದ್ದಲ್ಲದೇ, ಅಶಾಂತಿಗೆ ಕಾರಣನಾಗಿದ್ದಾನೆ. ಇಷ್ಟಾದರೂ ಈತನ ಮೇಲೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ಸರಕಾರ, ಅಧಿಕಾರಿಗಳ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ಮೂಡಿದೆ. ದ್ವೇಷ ಭಾಷಣ ಮಾಡಿದಾಗ ನ್ಯಾಯಾಂಗವು ಕಠಿಣ ಕ್ರಮ ಜರುಗಿಸದಿರುವುದರಿಂದಲೇ, ಈತ ದ್ವೇಷ ಭಾಷಣವನ್ನು ರಾಜಾರೋಷವಾಗಿ ಮುಂದುವರಿಸಿರುವುದು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮನುವಾದಿ ಯತ್ನಾಳ ಕಾನೂನು ಬಾಹಿರವಾಗಿ ಮನಬಂದಂತೆ ಮಾತನಾಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಸಂವಿಧಾನದಲ್ಲಿ ರಾಜ್ಯವು ಯಾವುದೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ತಾರತಮ್ಯವನ್ನು ಮಾಡತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ ಮತ್ತು ಅದರಡಿಯಲ್ಲಿ ರಚನೆಯಾಗಿರುವ ಕಾನೂನನ್ನೇ ಉಲ್ಲಂಘಿಸಿರುವ ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮೈತ್ರೇಯಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News