ಡಿಜಿಪಿಯಾಗಿ ನೇಮಕಗೊಂಡಿದ್ದ ಉಮೇಶ್ ಕುಮಾರ್, ಅರುಣ್ ಚಕ್ರವರ್ತಿ ಭಡ್ತಿಗೆ ತಡೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.18: ಐಪಿಎಸ್ ಅಧಿಕಾರಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರನ್ನು ಡಿಜಿಪಿಯಾಗಿ ಭಡ್ತಿ ನೀಡಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ತಡೆ ನೀಡಿರುವುದಾಗಿ ವರದಿಯಾಗಿದೆ.
ಡಿಜಿಪಿ ಹುದ್ದೆಯ ಆಕಾಂಕ್ಷಿಯಾಗಿದ್ದ ಅಲೋಕ್ ಕುಮಾರ್, ತನಗೆ ಸೇವಾ ಹಿರಿತನವಿದ್ದರೂ ಸರಕಾರ ತನ್ನನ್ನು ಪರಿಗಣಿಸದೇ ತನಗಿಂತ ಕಿರಿಯ ಅಧಿಕಾರಿಗಳಾದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರಿಗೆ ನೀಡಿದ್ದ ಭಡ್ತಿಯನ್ನು ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು.
ಅಲೋಕ್ ಕುಮಾರ್ ಅವರ ಅರ್ಜಿಗೆ ಸಂಬಂಧಿಸಿದಂತೆ ಸಿಎಟಿಯ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ರೀತಿಯ ತೀರ್ಪುಗಳನ್ನು ನೀಡಿದ್ದು, ಮೂರನೇ ನ್ಯಾಯಮೂರ್ತಿ ಇಲಾಖೆ ವಿಚಾರಣೆ ಬಗ್ಗೆ ತೀರ್ಮಾನಿಸಬೇಕಿದೆ ಎಂದು ತಿಳಿದುಬಂದಿದೆ.
ಇದರ ನಡುವೆ ಡಿಜಿಪಿಯಾಗಿ ನೇಮಕಗೊಂಡಿದ್ದ ಉಮೇಶ್ ಕುಮಾರ್ ಹಾಗೂ ಅರುಣ್ ಚಕ್ರವರ್ತಿ ಅವರ ಭಡ್ತಿಗೆ ಸಿಎಟಿ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ಅಲೋಕ್ ಕುಮಾರ್ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿಯಿರುವ ಹಿನ್ನೆಲೆಯಲ್ಲಿ ಇದನ್ನು ಮುಂದಿಟ್ಟು ರಾಜ್ಯ ಸರಕಾರ ಅವರಿಗೆ ಮುಂಭಡ್ತಿ ನೀಡಿರಲಿಲ್ಲ ಎನ್ನಲಾಗಿದೆ.