ಬೆಂಗಳೂರು | ಕರ್ತವ್ಯ ಲೋಪ ಆರೋಪ; ಇಬ್ಬರು ಇನ್ಸ್‌ಪೆಕ್ಟರ್ ಸೇರಿ ಐವರು ಪೊಲೀಸ್ ಸಿಬ್ಬಂದಿ ಅಮಾನತು
ಬೆಂಗಳೂರು, ಸೆ.23 : ಲಂಚಕ್ಕೆ ಬೇಡಿಕೆ ಇಟ್ಟು ಕರ್ತವ್ಯ ಲೋಪ ಎಸಗಿದ ಆರೋಪದಡಿ ಹಲಸೂರು ಗೇಟ್ ಠಾಣೆಯ ಇನ್ಸ್ ಪೆಕ್ಟರ್ ಹನುಮಂತ ಭಜಂತ್ರಿ ಹಾಗೂ ಕೋರಮಂಗಲ ಠಾಣೆಯ ಇನ್ಸ್ ಪೆಕ್ಟರ್ ಲೂಯಿರಾಮ ರೆಡ್ಡಿ ಸಹಿತ ಐವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.
ಚಿನ್ನದ ಉದ್ಯಮಿಯೊಬ್ಬರಿಂದ 10 ಲಕ್ಷ ರೂ. ವಸೂಲಿಗೆ ಯತ್ನಿಸಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ, ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹನುಮಂತ ಭಜಂತ್ರಿ, ಓರ್ವ ಎಎಸ್‍ಐ ಸೇರಿದಂತೆ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಅವಧಿಗೂ ಮೀರಿ ಪಬ್, ಬಾರ್, ರೆಸ್ಟೋರೆಂಟ್‍ಗಳು ಗ್ರಾಹಕರಿಗೆ ಸೇವೆ ನೀಡಲು ಅವಕಾಶ ನೀಡಿದ ಆರೋಪದಡಿ ಕೋರಮಂಗಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಲೂಯಿರಾಮ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ. ಆಗ್ನೆಯ ವಿಭಾಗ ಹಾಗೂ ಕೇಂದ್ರ ವಿಭಾಗದ ಡಿಸಿಪಿಯವರ ಪ್ರಾಥಮಿಕ ತನಿಖಾ ವರದಿ ಆಧರಿಸಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.