ಸರಕಾರದ ಸಮೀಕ್ಷೆ ನಾವು ಒಪ್ಪಲ್ಲ: ಸಿ.ಸಿ.ಪಾಟೀಲ್
Update: 2025-09-23 20:33 IST
ಬೆಂಗಳೂರು, ಸೆ.23: ರಾಜ್ಯ ಸರಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿವಾರು ಸಮೀಕ್ಷೆ) ಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾವ ರೀತಿ ಸರಕಾರ ಎಂದು ಅರ್ಥ ಆಗುತ್ತಿಲ್ಲ. ಒಂದು ಬಾರಿ ಜಾತಿ ಗಣತಿ ಎನ್ನುತ್ತಾರೆ. ಇನ್ನೊಂದು ಬಾರಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತಾರೆ. ಹಾಗಾದರೆ ಇದುವರೆಗೂ ಇವರ ಬಳಿ ಅಂಕಿಅಂಶಗಳು ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಗಣತಿ ಮಾಡಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಸರಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ವಿರೋಧಿ ಅಲೆ ಪಕ್ಷದಲ್ಲಿ ಮತ್ತು ಪಕ್ಷದ ಹೊರಗೆ ಇದೆ. ಅದನ್ನು ಮರೆ ಮಾಚಿಸಲು ಈ ಗಣತಿ ಮಾಡಿಸುತ್ತಿರಬಹುದು ಎಂದು ಅವರು ಟೀಕಿಸಿದರು.