×
Ad

ಸರಕಾರಿ ಆಸ್ಪತ್ರೆಗಳಲ್ಲಿ ಸಿಟಿ, ಎಂಆರ್‌ಐ ಸ್ಕ್ಯಾನ್‌ಗಳಿಗೆ ಶುಲ್ಕ ವಿಧಿಸುವುದು ಖಂಡನೀಯ : ಮೆಡಿಕಲ್ ಸರ್ವೀಸ್ ಸೆಂಟರ್

Update: 2025-09-28 23:37 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಸೆ.28: ರಾಜ್ಯದ ಹದಿನಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಪರೀಕ್ಷೆಗಾಗಿ, ಎಪಿಎಲ್ ಕಾರ್ಡ್‌ದಾರರಿಗೆ ಶೇ.70ರಷ್ಟು ಶುಲ್ಕ ವಿಧಿಸಿರುವ ಸರಕಾರದ ನಿರ್ಧಾರವನ್ನು ಖಂಡನೀಯ ಎಂದು ಮೆಡಿಕಲ್ ಸರ್ವಿಸ್ ಸೆಂಟರ್ ತಿಳಿಸಿದೆ.

ಈ ಕುರಿತು ಪ್ರಕಟನೆ ನೀಡಿರುವ ಎಂಎಸ್‌ಸಿ ರಾಜ್ಯ ಕಾರ್ಯದರ್ಶಿ ಡಾ.ವಸುಧೇಂದ್ರ ಎನ್, ರಾಜ್ಯದ ಹದಿನಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ಗೆ ಶುಲ್ಕ ವಿಧಿಸುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಂಪೂರ್ಣ ವ್ಯಾಪಾರೀಕರಣದೆಡೆಗೆ ಮತ್ತೊಂದು ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಸತ್ತಾತ್ಮಕ ಸರಕಾರದ ಪ್ರಾಥಮಿಕ ಹೊಣೆಗಾರಿಕೆ ಆರೋಗ್ಯ ವ್ಯವಸ್ಥೆಯಾಗಿದೆ. ಈ ರೀತಿ ಶುಲ್ಕ ಹೇರುವುದು ನ್ಯಾಯ ಸಮ್ಮತವಲ್ಲ. ವರ್ಗೀಕರಣದ ಆಧಾರದ ಮೇಲೆ ಸೌಲಭ್ಯಗಳನ್ನು ನಿಗಧಿಪಡಿಸುವುದು ಪ್ರಜಾಸತ್ತಾತ್ಮಕತೆಗೆ ವ್ಯತರಿಕ್ತವಾಗಿದೆ. ದಿನೇ ದಿನೇ ಪರೀಕ್ಷೆ ಮತ್ತು ಚಿಕಿತ್ಸೆಗಳ ವೆಚ್ಚ ದುಬಾರಿಯಾಗುತ್ತಿರುವ ಸಂದರ್ಭಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನತೆ ಹೆಚ್ಚಾಗಿ ಆಶ್ರಯಿಸಿರುವುದು ಸರಕಾರಿ ಆಸ್ಪತ್ರೆಗಳನ್ನು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.

ನೀತಿ ಆಯೋಗವೇ ಒಪ್ಪಿಕೊಂಡಂತೆ, ನಮ್ಮ ದೇಶದಲ್ಲಿ 100 ಮಿಲಿಯನ್ ಜನರು, ಆರೋಗ್ಯ ಸಂಬಂಧಿ ವೆಚ್ಚದಿಂದಾಗಿ, ಬಡತನ ರೇಖೆಯ ಕೆಳಗಡೆ ತಳ್ಳಲ್ಪಟ್ಟಿದ್ದಾರೆ. ಇಂತಹ ನಿರ್ಧಾರಗಳಿಂದ ಜನತೆ, ಸಾರ್ವಜನಿಕ ಅರೋಗ್ಯ ವ್ಯವಸ್ಥೆಯಿಂದ ಮತ್ತಷ್ಟು ದೂರ ತಳ್ಳಲ್ಪಡುತ್ತಾರೆ. ಅಲ್ಲದೆ, ಇದು ಚಿಕಿತ್ಸೆಯ ನಿರಾಕರಣೆಯೂ ಆಗುತ್ತದೆ. ಬದುಕುವ ಹಕ್ಕಿನ ನಿರಾಕರಣೆಯೂ ಆಗುತ್ತದೆ ಎಂದು ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳಿಗೆ ಶುಲ್ಕ ವಿಧಿಸುವ ನೀತಿಯನ್ನು ಸರಕಾರ ಹಿಂಪಡೆಯಬೇಕು. ಜನಸಾಮಾನ್ಯರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಕಲ್ಪಿಸಬೇಕು. ಜತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಪರಿಹರಿಸಿ, ಬಲಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News