ರಾಕೇಶ್ ಸಿಂಗ್ ಸೇರಿ ಐದು ಮಂದಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟೀಸ್
ಬೆಂಗಳೂರು, ಸೆ.28: ರಾಜ್ಯ ಅನಿಲ ಸರಬರಾಜು ನೀತಿ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಉಪಾದ್ಯಕ್ಷ ಮಂಜುನಾಥ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈ ದೂರನ್ನು ಆಧರಿಸಿ, ನಿವೃತ್ತ ಸರಕಾರಿ ಅಧಿಕಾರಿಗಳಾದ ರಾಕೇಶ್ ಸಿಂಗ್ ಸೇರಿದಂತೆ ಐದು ಮಂದಿ ಅಧಿಕಾರಿಗಳಿಗೆ ಲೋಕಾಯುಕ್ತರು ನೋಟೀಸ್ ಜಾರಿ ಮಾಡಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಲವು ವಾಸ್ತವ ಸಂಗತಿಗಳನ್ನು ಮರೆಮಾಚಿದ್ದಾರೆ ಮತ್ತು ದುರುದ್ದೇಶದಿಂದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ಲೋಕಾಯುಕ್ತರಿಗೆ ದಾಖಲೆ ಸಹಿತ 2025ರ ಎಪ್ರಿಲ್ ನಲ್ಲಿ ದೂರು ದಾಖಲಿಸಿತ್ತು.
ಈ ದೂರಿನ ಕುರಿತು ವಿಚಾರಣೆಗೆ ಕೈಗೆತ್ತಿಕೊಂಡಿರುವ ಲೋಕಾಯುಕ್ತರು 5 ತಿಂಗಳ ನಂತರ ಆಪಾದಿತ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ದೂರಿಗ ಸಂಬಂಧಿಸಿದಂತೆ ‘ಅಧಿಕಾರಿಗಳು ಆಕ್ಷೇಪಣೆ/ಉತ್ತರವನ್ನು ಸೂಕ್ತ ದಾಖಲಾತಿಗಳೊಂದಿಗೆ ತ್ವರಿತವಾಗಿ ದ್ವಿಪತ್ರಿಯಲ್ಲಿ ಅ.6ರೊಳಗೆ ಲೋಕಾಯುಕ್ತ ಕಚೇರಿಗೆ ತಪ್ಪದೇ ಸಲ್ಲಿಸಬೇಕು ಎಂದು ರಾಕೇಶ್ ಸಿಂಗ್, ತುಕಾರಾಮ ಕಲ್ಯಾಣಕರ್ ಸೇರಿದಂತೆ ಐದು ಮಂದಿ ಅಧಿಕಾರಿಗಳಿಗೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.
ಆಪಾದಿತ ಅಧಿಕಾರಿಗಳ ಪೈಕಿ ರಾಕೇಶ್ ಸಿಂಗ್ ಅವರು ನಿವೃತ್ತರಾಗಿದ್ದು, ರೇರಾದ ಹಾಲಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ನಗರಾಭಿವೃದ್ಧಿ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿಯಾಗಿದ್ದ ತುಕಾರಾಮ ಕಲ್ಯಾಣಕರ ಅವರು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಆಪ್ತ ಕಾರ್ಯದರ್ಶಿಯಾಗೆ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಅಧಿಕಾರಿಗಳು ತಮ್ಮ ಸ್ಥಾನದಲ್ಲಿಯೇ ಮುಂದುವರೆಯುತ್ತಿದ್ದಾರೆ.
ರಾಜ್ಯ ನಗರ ಅನಿಲ ಸರಬರಾಜು ನೀತಿ ಜಾರಿಗೆ ಬಂದಲ್ಲಿ ಅಂದಿನ ಬಿಬಿಎಂಪಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಲಿದೆ. ಆದರೆ ಈ ಆರ್ಥಿಕ ನಷ್ಟವನ್ನು ಮುನ್ನೆಲೆಗೆ ತರದೇ ಮರೆಮಾಚುವ ದುರುದ್ದೇಶದಿಂದಲೇ ಅನಿಲ ಸರಬರಾಜು ಸಂಸ್ಥೆಗಳ ಜೊತೆ ಈ ಅಧಿಕಾರಿಗಳು ಸಂಚು ರೂಪಿಸಿದ್ದರು. ಈ ಮೂಲಕ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳು ಅಂದಿನ ಬಿಬಿಎಂಪಿಯ ಅಭಿಪ್ರಾಯ ಮತ್ತು ಮತ್ತು ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ ಪಡೆದಿಲ್ಲ. ಬದಲಿಗೆ ಕಡತವನ್ನು ನೇರವಾಗಿ ಜಂಟಿ ನಿರ್ದೇಶಕರ ಅಭಿಪ್ರಾಯಕ್ಕಾಗಿ ಕಳಿಸಲಾಗಿತ್ತು ಎಂದು ದೂರಿನಲ್ಲಿ ಮಂಜುನಾಥ್ ಅವರು ಆಪಾದಿಸಿದ್ದರು.