×
Ad

ಮೆಟ್ರೊ ನಿಲ್ದಾಣಗಳಿಗೆ ಸಾಹಿತಿಗಳ ಹೆಸರು | ದಲಿತ, ಮಹಿಳಾ, ಅಲ್ಪಸಂಖ್ಯಾತರ ಹೆಸರಿಲ್ಲವೆಂದು ಪ್ರೊ.ಮುಕುಂದರಾಜ್ ಪತ್ರಕ್ಕೆ ಆಕ್ಷೇಪ

Update: 2025-10-02 23:46 IST

ಪ್ರೊ.ಮುಕುಂದರಾಜ್ 

ಬೆಂಗಳೂರು, ಅ.2: ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ.ಮುಕುಂದರಾಜ್ ನಗರದ ವಿವಿಧ ಮೆಟ್ರೊ ನಿಲ್ದಾಣಗಳಿಗೆ ಸಾಹಿತಿ ಮತ್ತು ಚಿಂತಕರ ಹೆಸರಿಡುವಂತೆ ಸೂಚಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಎಂಆರ್‌ಸಿಎಲ್‌ಗೆ ಇತ್ತೀಚೆಗೆ ಪತ್ರ ಬರೆದಿದ್ದು, ಪತ್ರದಲ್ಲಿ ದಲಿತ, ಮಹಿಳಾ ಹಾಗೂ ಅಲ್ಪಸಂಖ್ಯಾತ ಸಾಹಿತಿ-ಚಿಂತಕರ ಹೆಸರಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಸಾಹಿತಿ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸೇರಿ 15 ಸಾಹಿತಿಗಳ ಹೆಸರನ್ನು ಮೆಟ್ರೊ ನಿಲ್ದಾಣಗಳಿಗೆ ಇಡಬೇಕೆಂದು ಎಲ್.ಎನ್.ಮುಕುಂದರಾಜ್ ಅವರು ಸೆ.9ರಂದು ಸಿಎಂಗೆ ಪತ್ರ ಬರೆದು, ಬೆಂಗಳೂರಿನಲ್ಲಿ ವಾಸವಾಗಿದ್ದ ಸಾಹಿತಿ-ಚಿಂತಕರ ಹೆಸರನ್ನು ಆಯಾ ಪ್ರದೇಶಗಳ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಮೆಟ್ರೊ ನಿಲ್ದಾಣಗಳಿಗೆ ಹೆಸರಿಡುವಂತೆ ಸೂಚಿಸಿದ್ದರು.

ಪ್ರೊ.ಮುಕುಂದರಾಜ್ ಅವರು ಬರೆದ ಪತ್ರದಲ್ಲಿ ರಾಜಾಜಿನಗರಕ್ಕೆ ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್, ಇಂದಿರಾ ನಗರಕ್ಕೆ ಬಿಎಂಶ್ರೀ, ಎನ್‌ಜೆಇಎಫ್‌ಗೆ ತ.ರಂ ಕೃಷ್ಣೇಗೌಡ, ಮೈಸೂರು ರಸ್ತೆಗೆ ಎಚ್.ಎಲ್.ನಾಗೇಗೌಡ, ಬಸವನಗುಡಿಗೆ ಟಿ.ಆರ್.ಶಾಮಣ್ಣ, ನ್ಯಾಷನಲ್ ಕಾಲೇಜಿಗೆ ಎಚ್.ನರಸಿಂಹಯ್ಯ, ವಿಜಯನಗರ/ಅತ್ತಿಗುಪ್ಪೆಗೆ ರಾಜೇಗೌಡ ಹೊಸಹಳ್ಳಿ, ಕೆ.ಆರ್.ಮಾರುಕಟ್ಟೆ/ಚಾಮರಾಜಪೇಟೆಗೆ ಜಿ.ನಾರಾಯಣ, ಮಲ್ಲೇಶ್ವರಂಗೆ ಎಂ.ಪಿ.ಎಲ್.ಶಾಸ್ತ್ರಿ, ಮಹಾಲಕ್ಷ್ಮೀ ಲೇಔಟ್‌ಗೆ ಕ.ರಾ.ಕೃ, ಶ್ರೀರಾಂಪುರಕ್ಕೆ ಎಂ.ಎಚ್.ಕೃಷ್ಣಯ್ಯ, ಬನಶಂಕರಿಗೆ ಜಿ.ಎಸ್.ಶಿವರುದ್ರಪ್ಪ, ಜಯನಗರಕ್ಕೆ ಪಿ.ಲಂಕೇಶ್, ಜೆ.ಪಿ.ನಗರಕ್ಕೆ ಜಿ.ನಾರಾಯಣ ಕುಮಾರ್, ಆರ್.ವಿ.ಕಾಲೇಜ್ ಮೆಟ್ರೊಗೆ ಕೀ.ರಂ.ನಾಗರಾಜ್ ಅವರ ಹೆಸರಿಡುವಂತೆ ಸೂಚಿಸಲಾಗಿದೆ.

ಮಹಿಳಾ ಸಾಹಿತಿಗಳ ಹೆಸರು ನೆನಪಿಗೆ ಬರಲಿಲ್ಲವೋ? ಅಥವಾ ಬೇಕಂತಲೇ ಇಡಲಿಲ್ಲವೋ?’ ಎಂದು ಯುವ ಕತೆಗಾರ ದಾದಾಪೀರ್ ಜೈಮನ್ ಪ್ರಶ್ನಿಸಿದರೆ, ‘ಶ್ರೀರಾಂಪುರ ಮೆಟ್ರೊ ನಿಲ್ದಾಣಕ್ಕೆ ಕವಿ ಡಾ.ಸಿದ್ದಲಿಂಗಯ್ಯ ಅವರ ಹೆಸರು ಇಡಲೇಬೇಕು. ಉಳಿದಂತೆ ಪಟ್ಟಿಯಲ್ಲಿ ಅರ್ಧದಷ್ಟಾದರೂ ಪುರುಷರನ್ನು ಹೊರಗಿಟ್ಟು ಮಹಿಳೆಯರನ್ನು ಗುರುತಿಸಬೇಕು’ ಎಂದು ಪತ್ರಕರ್ತ ಗುರುಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮುಕುಂದರಾಜ್ ಅವರ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಕಾರ್ಯದರ್ಶಿ ಅವರಿಗೆ ಕಳಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಡಾ.ಸಿದ್ದಲಿಂಗಯ್ಯ, ನಿಸಾರ್ ಅಹಮದ್ ಹೆಸರು ಬರೆಯದ ಬಗ್ಗೆ ವಿಷಾದವಿದೆ :

‘ಡಾ.ಸಿದ್ದಲಿಂಗಯ್ಯ, ನಿಸಾರ್ ಅಹಮದ್, ಎಸ್.ಕೆ.ಕರೀಂ ಖಾನ್ ಹೆಸರು ಇಲ್ಲದಿರುವ ಬಗ್ಗೆ ವಿಷಾದವಿದೆ. ಆ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಮುಂದೆ ಅದನ್ನು ತಿದ್ದಿಕೊಳ್ಳುತ್ತೇನೆ. ಇದು ಪ್ರಾಯೋಗಿಕವಾಗಿ ಪತ್ರ ಬರೆದಿದ್ದೇನೆ. ಅದರ ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಬೇರೆಯವರ ಹೆಸರನ್ನು ಸೂಚಿಸುತ್ತೇನೆ. ಕೆಲವರು ಉತ್ತರ ಕರ್ನಾಟಕ ಸಾಹಿತಿಗಳನ್ನು ಸೂಚಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ರೈಲ್ವೆ ನಿಲ್ದಾಣ, ಸಭಾ ಮಂದಿರಗಳಿಗೆ ಸೂಚಿಸಬಹುದು ಎನ್ನುವುದು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ.ಮುಕುಂದರಾಜ್ ಅಭಿಪ್ರಾಯ.

ಹದಿನೈದು ಜನ ಸಾಧಕರು ಜಾತಿಯ ಕಾರಣಕ್ಕೆ ದೊಡ್ಡವರಾಗಿಲ್ಲ. ಬಿಎಂಶ್ರೀ ಮತ್ತು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರನ್ನು ಯಾವುದೇ ಜಾತಿಗೆ ಸೀಮಿತಗೊಳಿಸಲು ಆಗುವುದಿಲ್ಲ. ಅದೂ ಅಲ್ಲದೇ ಕೀ.ರಂ.ನಾಗರಾಜ್ ಅವರನ್ನು ಬ್ರಾಹ್ಮಣ ಎಂದು ಕಡೆಗಣಿಸಲು ಸಾಧ್ಯವಿದೆಯೇ? ದಲಿತ ಸಾಹಿತ್ಯ ದೊಡ್ಡ ಬೆಂಬಲವಾಗಿ ನಿಂತವರು ಕೀ.ರಂ.ನಾಗರಾಜ್. ಡಾ.ಸಿದ್ದಲಿಂಗಯ್ಯರ ಮೊದಲ ಕವನ ಸಂಕಲನ ‘ಹೊಲೆಮಾದಿಗರ ಹಾಡು’ ಕೃತಿಯನ್ನು ಸೈಕಲ್ ಮೇಲೆ ಮಾರಾಟ ಮಾಡಿದ್ದಾರೆ. ಅವರು ಎಲ್ಲ ಜಾತಿಯ ಸಾಹಿತಿಗಳಿಗೆ ಪ್ರೋತ್ಸಾಹ ಕೊಟ್ಟವರು. ನಾನು ಪ್ರತಿ ಯೋಜನೆಯಲ್ಲೂ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯವನ್ನು ನೀಡಿದ್ದೇನೆ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದೇನೆ. ಎಲ್ಲ ಪ್ರಾತಿನಿಧ್ಯಗಳಲ್ಲಿ ಲೋಪಬರದ ಹಾಗೆ ಕೆಲಸ ಮಾಡಿದ್ದೇನೆ.

-ಪ್ರೊ.ಮುಕುಂದರಾಜ್, ಅಧ್ಯಕ್ಷ, ಸಾಹಿತ್ಯ ಅಕಾಡಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News