ಜನರಿಗೆ ಬೇಕಿರುವುದು ಮ್ಯಾಜಿಕ್ ಮಾತುಗಳಲ್ಲ, ಲಾಜಿಕ್ ಮಾತುಗಳು : ಪ್ರಹ್ಲಾದ್ ಜೋಶಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
Update: 2025-10-04 23:23 IST
ಬೆಂಗಳೂರು, ಅ. 4: ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ, ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತ ಮತಾಂತರವಾಗಿದ್ದಾರೆ ಎಂದು ನಿಮ್ಮದೇ ಪಕ್ಷದವರು ತಿಳಿಸಿದ್ದರು. ಇವರ ಮತಾಂತರಕ್ಕೆ ಪ್ರೇರಣೆಯಾದ ಸಂಗತಿ ಯಾವುದು?’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿ ಪಕ್ಷದವರಿಗಾಗಿ ‘ಘರ್ ವಾಪಸಿ ಕಾರ್ಯಕ್ರಮ ಹಮ್ಮಿಕೊಳ್ಳುವರಾ, ಚಿಂತಿಸಿ. ಪ್ರಹ್ಲಾದ್ ಜೋಶಿಯವರೇ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದ ಮತಾಂತರವಾಗಲು ಸಾಧ್ಯವೇ? ನಿಮ್ಮ ಪ್ರಕಾರ ಹಿಂದೂ ಧರ್ಮ ಅಷ್ಟೊಂದು ದುರ್ಬಲವೇ?. ಜೋಶಿಯವರಿಗೆ ತಿಳಿದಿರಲಿ, ಜನರಿಗೆ ಬೇಕಿರುವುದು ಮ್ಯಾಜಿಕ್ ಮಾತುಗಳಲ್ಲ, ಲಾಜಿಕ್ ಮಾತುಗಳು’ ಎಂದು ತಿರುಗೇಟು ನೀಡಿದ್ದಾರೆ.