×
Ad

ಕ್ರೈಸ್ತಧರ್ಮ ಅನುಸರಿಸುವ ಮಾದಿಗರು ಸಮೀಕ್ಷೆಯಲ್ಲಿ ಮಾದಿಗ ಎಂದೇ ಬರೆಸಿ : ಕೆ.ಎಚ್.ಮುನಿಯಪ್ಪ

Update: 2025-10-04 23:38 IST

ಬೆಂಗಳೂರು, ಅ.4: ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿರುವ ಮಾದಿಗರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ 'ಮಾದಿಗ' ಎಂದೇ ಬರೆಸಿ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಮಾದಾರ ಮಹಾಸಭಾದ ವತಿಯಿಂದ ನಡೆದ 'ಕ್ರೈಸ್ತ ಧರ್ಮ ಅನುಸರಿಸುತ್ತಿರುವ ಫಾಸ್ಟರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯದವರು ಕಾರಣಾಂತರಗಳಿಂದ ಬೇರೆ ಬೇರೆ ಧರ್ಮವನ್ನು ಅನುಸರಣೆ ಮಾಡುತ್ತಿದ್ದು, ಮುಂದಿನ ಪೀಳಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಮಾದಿಗ, ಧರ್ಮ ಹಿಂದೂ ಎಂದು ಬರೆಸಬೇಕು ಎಂದರು.

ಈಗಾಗಲೇ ಸಮೀಕ್ಷೆಯಲ್ಲಿ ಮಾದಿಗರು ಕ್ರಿಶ್ಚಿಯನ್ ಎಂದು ಬರೆಸಿದ್ದರೆ, ಅದರ ಬಗ್ಗೆ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜೊತೆ ಚರ್ಚಿಸಿ ಅದನ್ನು ಸರಿಪಡಿಸಲು ಕ್ರಮವಹಿಸಲಾಗುವುದು ಎಂದರು.

ಚಿಂತಕ ಫಾ.ರೆ.ಡಾ.ಮನೋಹರ್ ಚಂದ್ರಪ್ರಸಾದ್ ಮಾತನಾಡಿ, 'ಮಾದಿಗ ಸಮುದಾಯವು ಅನೇಕ ಶೋಷಣೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಶೇ.12ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಆ ಪೈಕಿ ಸುಮಾರು ಶೇ.10ರಷ್ಟು ದಲಿತ ಸಮುದಾಯದಿಂದ ಬಂದವರು ಇದ್ದಾರೆ. ಮಾದಿಗ ಸಮುದಾಯದವರು ಹೆಚ್ಚಾಗಿದ್ದಾರೆ. ದಲಿತ ಕ್ರೈಸ್ತರು ನಮ್ಮ ಮೂಲಜಾತಿಯ ಅಸ್ಥಿತೆಯನ್ನು ಉಳಿಸಿಕೊಳ್ಳಬೇಕು. ನಿಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ನಿವೃತ್ತ ಐಆರ್‌ಎಸ್ ಅಧಿಕಾರಿ ಭೀಮಾಶಂಕರ್, ಒಳಮೀಸಲಾತಿ ಹೋರಾಟಗಾರ ಕೇಶವಮೂರ್ತಿ, ಮರಿಸ್ವಾಮಿ, ವೆಂಕಟೇಶ್ ದೊಡೇರಿ ಮತ್ತಿತರರು ಉಪಸ್ಥಿತರಿದ್ದರು.

ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಒಳಮೀಸಲಾತಿ ನೀಡಲಾಗಿದ್ದು, ಕ್ರಿಶ್ಚಿಯನ್ ಎಂದು ಬರೆಸಿದರೇ ಭವಿಷ್ಯದಲ್ಲಿ ಮೀಸಲಾತಿಯಿಂದ ವಂಚಿತವಾಗಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾವುದೇ ಧರ್ಮಕ್ಕೆ ಬೇಕಾದರೂ ಹೋಗುವ ಹಕ್ಕಿದೆ, ಅದನ್ನು ನಾವು ಪ್ರಶ್ನಿಸುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಎಂದು ಬರೆಸಿದರೆ, ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಾಗುತ್ತದೆ. ಜನಸಂಖ್ಯೆಯ ಆಧಾರದಲ್ಲಿ ನಾವು ನಮ್ಮ ಹಕ್ಕು ಗಳನ್ನು ಪಡೆದುಕೊಳ್ಳಬಹುದು. ಅದರ ಜೊತೆಗೆ ಮುಂದಿನ ದಿನಗಳಲ್ಲಿ ಶೇ.7ರಷ್ಟು ಒಳಮೀಸಲಾತಿ ಕೇಳಬಹುದು. ಎಲ್ಲರೂ ಸಹಕರಿಸಿದರೆ ಶೇ.7ರಷ್ಟು ಒಳಮೀಸಲಾತಿ ಪಡೆದುಕೊಳ್ಳಬಹುದು.

-ಕೆ.ಎಚ್‌.ಮುನಿಯಪ್ಪ ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News