×
Ad

ಬೆಂಗಳೂರು | ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಲು ಲಂಚ: ಇಂಧನ ಸಚಿವರ ವಿಶೇಷಾಧಿಕಾರಿ ಸಹಿತ ಇಬ್ಬರ ಬಂಧನ

Update: 2025-10-05 19:07 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.5: ವಿದ್ಯುತ್ ಸಂಪರ್ಕಕ್ಕೆ ಅನುಮತಿ(ಎನ್‍ಒಸಿ) ನೀಡಲು ಲಂಚ ಪಡೆಯುತ್ತಿದ್ದ ಪ್ರಕರಣದಡಿ ಇಂಧನ ಸಚಿವರ ವಿಶೇಷಾಧಿಕಾರಿ ಸಹಿತ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

50 ಸಾವಿರ ರೂ. ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಜ್ಯೋತಿ ಪ್ರಕಾಶ್ ಹಾಗೂ ಅವರ ಕಾರು ಚಾಲಕ ನವೀನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಪಿಟಿಸಿಎಲ್‍ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವ ಜ್ಯೋತಿ ಪ್ರಕಾಶ್ ಅವರು, ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಡರಹಳ್ಳಿಯ ನಿವಾಸಿಯಾದ ಕೆ.ಎಂ.ಅನಂತರಾಜು ಅವರು ಬಡಾವಣೆ ನಿರ್ಮಾಣ ಕಾಮಗಾರಿಗೆ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಎನ್‍ಒಸಿ ನೀಡಲು ಜ್ಯೋತಿ ಪ್ರಕಾಶ್ ಅವರು 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಅನಂತರಾಜು ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದ ತಂಡ ಅನಂತರಾಜು ಅವರಿಂದ 50 ಸಾವಿರ ರೂ. ಸ್ವೀಕರಿಸುತ್ತಿದ್ದ ಜ್ಯೋತಿ ಪ್ರಕಾಶ್ ಮತ್ತು ಅವರ ಚಾಲಕ ನವೀನ್‍ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News