‘ಕನ್ನಡ ಕಟ್ಟಾಳು’ ಪ್ರಶಸ್ತಿಗೆ ಬಿ.ಎಂ.ನಾರಾಯಣಸ್ವಾಮಿ, ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿಗೆ ಜಯಲಕ್ಷ್ಮಿ ಪಾಟೀಲ್ ಆಯ್ಕೆ
ಬೆಂಗಳೂರು, ಅ. 11: 2025ನೇ ಸಾಲಿಗೆ ‘ಕನ್ನಡ ಕಟ್ಟಾಳು’ ಪ್ರಶಸ್ತಿಗೆ ಕನ್ನಡ ಕಾರ್ಯಕರ್ತ ಬಿ.ಎಂ.ನಾರಾಯಣಸ್ವಾಮಿ ಹಾಗೂ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿಗೆ ಹಿರಿಯ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಘರ್ಷ ಸಮಿತಿ ತಿಳಿಸಿದೆ.
ಶನಿವಾರ ಈ ಕುರಿತು ಪ್ರಕರಣೆ ನೀಡಿರುವ ಸಮಿತಿ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಅ.31ರ ಸಂಜೆ 4.30ಕ್ಕೆ ನಗರದ ನರಸಿಂಹರಾಜ ಕಾಲನಿಯಲ್ಲಿರುವ ಬಿ.ಎಂ.ಶ್ರೀ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಸಮಿತಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಸ್ಮರಣಿಕೆ ಹಾಗೂ ತಲಾ 11ಸಾವಿರ ರೂ.ನಗದು ಪುರಸ್ಕಾರ ಹೊಂದಿರುತ್ತದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮವನ್ನು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮಿಗಳು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಬಿಡುಗಡೆ ಮಾಡಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ರಾಮಣ್ಣ ಎಚ್.ಕೋಡಿಹೊಸಹಳ್ಳಿ ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.