ಮಹಿಳೆಯರು ಕಾನೂನು ಅರಿತರೆ ಕಿರುಕುಳ ತಡೆಗಟ್ಟಬಹುದು: ವಿಜಯ ರಾಹತ್ಕರ್
‘ಲಿಂಗ ಸಂವೇದನೆ ಮತ್ತು ಸೈಬರ್ ಜಾಗೃತಿ' ಕಾರ್ಯಾಗಾರ
ಬೆಂಗಳೂರು, ಅ.14: ಸೈಬರ್ ಕ್ರೈಂ, ಡೀಪ್ ಫೇಕ್, ಫೊಟೊ ಮಾರ್ಫಿಂಗ್ ಸೇರಿದಂತೆ ಇನ್ನೂ ಅನೇಕ ರೀತಿಯಲ್ಲಿ ಮಹಿಳೆಯರ ಮೇಲೆ ಕಿರುಕುಳ ನಡೆಯುತ್ತಿದೆ. ಮಹಿಳೆಯರ ರಕ್ಷಣೆಗೆ ರೂಪಿಸಿರುವ ಕಾನೂನು ಮತ್ತು ಹಕ್ಕುಗಳನ್ನು ಅರಿತುಕೊಂಡು ಸಂಘಟಿತರಾದರೆ ಮಹಿಳಾ ಕಿರುಕುಳವನ್ನು ತಡೆಗಟ್ಟಬಹುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯ ರಾಹತ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜು, ಕಾನೂನು ಅಧ್ಯಯನ ವಿಭಾಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಕ್ಯಾಂಪಸ್ ಕಾಲಿಂಗ್' ಕಾರ್ಯಕ್ರಮದಡಿ ‘ಲಿಂಗ ಸಂವೇದನೆ ಮತ್ತು ಸೈಬರ್ ಜಾಗೃತಿ' ಕುರಿತಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾಲೇಜು, ವಿಶ್ವವಿದ್ಯಾಲಯಗಳು ಕೇವಲ ಶಿಕ್ಷಣ ಸಂಸ್ಥೆಗಳಲ್ಲ, ರಾಷ್ಟ್ರ ನಿರ್ಮಾಣದ ಕೇಂದ್ರಗಳಾಗಿವೆ. ಪ್ರಸ್ತುತ ವಿದ್ಯಾರ್ಥಿ ಸಮೂಹ ಪ್ರಗತಿಯತ್ತ, ಹೊಸ ವಿಚಾರ, ಚಿಂತನೆಗಳೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕಿದೆ ಎಂದರು.
ಸರಕಾರಗಳು ಮಹಿಳೆಯರ ರಕ್ಷಣೆಗೆ ಅನೇಕ ಕಾನೂನುಗಳನ್ನು ರೂಪಿಸಿದ್ದರೂ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹಿಳಾ ಅಸಮಾನತೆ ಮತ್ತು ಕಿರುಕುಳ ಪ್ರಕರಣಗಳು ಕಾಣ ಸಿಗುತ್ತಿವೆ. ಮಹಿಳೆಯರು ತಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ಅರಿತುಕೊಳ್ಳಬೇಕು. ಸೈಬರ್ ಕ್ರೈಂ, ಡೀಪ್ ಫೇಕ್, ಫೊಟೊ ಮಾರ್ಫಿಂಗ್ ಕಿರುಕುಳ ಹೆಚ್ಚಾಗಿದೆ. ಪ್ರತಿ ಮಹಿಳೆಯು ಕಾನೂನಿನ ಕುರಿತು ಅರಿವು ಪಡೆಯಬೇಕು ಎಂದು ಸಲಹೆ ನೀಡಿದರು.
ಮಹಿಳೆಯರು ಪಾಶ್ ಮತ್ತು ಪೊಕ್ಸೋ ಬಗ್ಗೆ ತಿಳಿದುಕೊಳ್ಳಬೇಕು. 2047ರೊಳಗೆ ಭಾರತೀಯ ಮಹಿಳೆಯರು ಸಶಕ್ತ, ಸುರಕ್ಷಿತ, ಸಂಘಟಿತ ಸಮಾಜದಲ್ಲಿ ಜೀವಿಸುವಂತಿರಬೇಕು. ಆ ನಿಟ್ಟಿನಲ್ಲಿ ಇಡೀ ಸಮಾಜ ಸೃಷ್ಟಿಯಾಗಬೇಕು ಎಂದು ಆಶಿಸಿದರು.
ಕಾನೂನು ನಿಕಾಯದ ಡೀನ್ ಪ್ರೊ.ವಿ.ಸುದೇಶ್ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಅವಕಾಶಗಳು ವಿಫುಲವಾಗಿದ್ದು, ವಿದ್ಯಾರ್ಥಿಗಳ ಮುಕ್ತ ಅಧ್ಯಯನಕ್ಕೆ ಸಹಕಾರಿಯಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಅಧ್ಯಯನ ವಿಭಾಗ ಮಹಿಳಾ ಕಾನೂನು ಮತ್ತು ಹಕ್ಕುಗಳ ಕುರಿತು ನಿರಂತರವಾಗಿ ಮಾಹಿತಿ ಒದಗಿಸುವ ಕಾರ್ಯದಲ್ಲಿ ತೊಡಗಲಿದೆ ಎಂದು ತಿಳಿಸಿದರು.
ಬೆಂಗಳೂರು ವಿವಿ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ದಶರಥ್, ಕಾನೂನು ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಜ್ಯೋತಿ ವಿಶ್ವನಾಥ್, ಬೆಂಗಳೂರು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣನವರ್, ಮಹಿಳಾ ಆಯೋಗದ ಕಾನೂನು ಸಲಹೆಗಾರ್ತಿ ಶಾಂತಲಾ ಭಟ್, ಆಯೋಗದ ಉಪ ನಿರ್ದೇಶಕರು ರಾಮವತಾರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.