ಕನಕದಾಸರು-ನಾರಾಯಣಗುರುಗಳ ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕು : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಅ.16: ಕನಕದಾಸರು ಮತ್ತು ನಾರಾಯಣಗುರುಗಳ ಆದರ್ಶಗಳನ್ನು ಕೇವಲ ಕೇಳಿ ಎದ್ದು ಹೋಗಬಾರದು, ಅವುಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಗುರುವಾರ ಇಲ್ಲಿನ ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ನಡೆದ “ಕನಕ ಕಾವ್ಯ ದೀವಿಗೆ” ಮೂರು ದಿನಗಳ ಕನಕ ಸಂಭ್ರಮ, ಸಂಸ್ಕೃತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 16ನೇ ಶತಮಾನದಲ್ಲೇ ಕನಕದಾಸರು ಜನಿಸಿದ್ದರು. ಪಾಳೇಗಾರರ ಕುಟುಂಬದಲ್ಲಿ ಜನಿಸಿದರೂ, ಸಂತರಾದರು ಮಾತ್ರವಲ್ಲ ಕವಿ, ದಾರ್ಶನಿಕರು, ಸಾಮಾಜಿಕ ಹೋರಾಟಗಾರರೂ ಆಗಿದ್ದರು ಎಂದರು.
ಸಮಾಜದ ಅಸಮಾನತೆ ವಿರುದ್ಧ ಬಂಡಾಯ ಹೂಡಿದರು. ಬುದ್ದ, ಬಸವ, ನಾರಾಯಣಗುರು, ಕನಕದಾಸರು ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದರು. ಆದರೆ, ಜಾತಿ ವ್ಯವಸ್ಥೆಗೆ ಪಟ್ಟಭದ್ರರು ಇನ್ನೂ ನೀರೆರೆಯುತ್ತಲೇ ಇದ್ದಾರೆ. ಹೀಗಾಗಿ ಸಮಾಜದ ಬದಲಾವಣೆಗೆ ಧೈರ್ಯ ಬೇಕಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆಯ ಶಕ್ತಿಯಿಂದ ಸಮಾಜದ ಅಸಮಾನತೆ ಅಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಯಾವ ದೇವಸ್ಥಾನಕ್ಕೆ ನಿಮ್ಮನ್ನು ಬಿಡುವುದಿಲ್ಲವೋ, ಆ ದೇವಸ್ಥಾನಕ್ಕೆ ಹೋಗಬೇಡಿ. ನಿಮ್ಮದೇ ದೇವರುಗಳಿಗೆ ನಿಮ್ಮದೇ ದೇವಸ್ಥಾನ ಕಟ್ಟಿಸಿ ಎಂದು ನಾರಾಯಣಗುರುಗಳು ಕರೆ ನೀಡಿದ್ದರು. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಸೇರಿಸುವುದಿಲ್ಲವೋ ಆ ದೇವಸ್ಥಾನಕ್ಕೆ ಹೋಗಿ ಇಣುಕುವ ಅಗತ್ಯ ಏನಿದೆ?, ಹೊರಗೇ ನಿಂತು ಕೈ ಮುಗಿಯುವುದಕ್ಕಿಂತ ನಿಮ್ಮದೇ ಗುಡಿ ನಿರ್ಮಿಸಿ ಎನ್ನುವ ನಾರಾಯಣಗುರುಗಳ ಆದರ್ಶ ಪಾಲನೆ ಆಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
16ನೇ ಶತಮಾನದಲ್ಲಿ ಕನಕದಾಸರು, ‘ಕುಲ ಕುಲ ಕುಲ ಎಂದು ಬಡಿದಾಡದಿರಿ’ ಎಂದರು. 12ನೇ ಶತಮಾನಲ್ಲಿ ಬಸವಣ್ಣನವರು ‘ಇವನಾರವ, ಇವನಾರವ ಎನ್ನದಿರಿ; ಇವ ನಮ್ಮವ ಎಂದೆಣಿಸಯ್ಯಾ’ ಎಂದು ಹೇಳಿದರು. ಆದರೂ ಇವತ್ತಿಗೂ ಕುಲ ಮತ್ತು ಇವನಾರವ ಎನ್ನುವ ಜಾತಿ ತಾರತಮ್ಯ ಆಚರಣೆಯಲ್ಲಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ವಿಜ್ಞಾನ ಓದಿದವರೂ ಕೂಡ ಮೂಢ ನಂಬಿಕೆ, ಕಂದಾಚಾರ, ಕರ್ಮ ಸಿದ್ಧಾಂತ, ಹಣೆಬರಹವನ್ನು ನಂಬುತ್ತಾರೆ. ಇವರು ವಿಜ್ಞಾನದಲ್ಲಿ ಪದವಿ ತೆಗೆದುಕೊಂಡಿದ್ದೂ ದಂಡ ಆಗುವುದಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮರು ಜನ್ಮ, ಸ್ವರ್ಗ, ನರಕದ ಹೆಸರಲ್ಲಿ ಹೆದರಿಸುವುದನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ಒಪ್ಪುತ್ತಿರಲಿಲ್ಲ. ಸ್ವರ್ಗ, ನರಕ, ಮುಂದಿನ ಜನ್ಮ ಎನ್ನುವುದೆಲ್ಲಾ ಯಾವುದೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಶಾಸಕ ಮುನಿರತ್ನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎ.ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.