×
Ad

ವಿದ್ಯುತ್ ಖಾಸಗೀಕರಣ, ಸ್ಮಾರ್ಟ್ ಮೀಟರ್ ಅಳವಡಿಕೆಗೆ ಖಂಡನೆ

Update: 2025-10-26 23:56 IST

ಬೆಂಗಳೂರು : ಸಾಮಾಜಿಕ ಜೀವನದ ಮೂಲಭೂತ ಅಗತ್ಯಗಳಲ್ಲಿ ವಿದ್ಯುತ್ ಪ್ರಮುಖ ಅಂಶ. ವಿದ್ಯುತ್ ಇಲ್ಲದಿದ್ದರೆ ಜೀವನವು ಸ್ಥಗಿತಗೊಳ್ಳುವ ಮಟ್ಟಿಗೆ ನಾವು ಅವಲಂಬಿತರಾಗಿದ್ದೇವೆ. ಒಂದು ಕಾಲದಲ್ಲಿ ಸರಕಾರದ ಅಡಿಯಲ್ಲಿದ್ದ ವಿದ್ಯುತ್ ಉದ್ಯಮವು ಈಗ ಖಾಸಗೀಕರಣವಾಗುತ್ತಿದೆ. ಬಂಡವಾಳಶಾಹಿ ವರ್ಗವು ವಿದ್ಯುತ್ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಬಯಸುತ್ತಿದೆ. ಕೂಡಲೇ ವಿದ್ಯುತ್ ವಲಯದ ಖಾಸಗೀಕರಣ ಹಾಗೂ ಸ್ಮಾರ್ಟ್‌ಮೀಟರ್ ಅಳವಡಿಕೆಯನ್ನು ನಿಲ್ಲಿಸಬೇಕು ಎಂದು ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘದ(ಎಐಇಸಿಎ)ಅಧ್ಯಕ್ಷ ಸ್ವಪನ್ ಘೋಷ್ ಆಗ್ರಹಿಸಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ(ಎಐಇಸಿಎ)ದ ವತಿಯಿಂದ ನಡೆದ ‘ದಕ್ಷಿಣ ಭಾರತದ ವಿದ್ಯುತ್ ಗ್ರಾಹಕರ ಸಮಾವೇಶ’ದಲ್ಲಿ ಮಾತನಾಡಿದ ಅವರು, ವಿದ್ಯುತ್ ವಲಯದ ಮೇಲೆ ಬಂಡವಾಳಶಾಹಿಗಳ ಗಮನವು ಸಾರ್ವಜನಿಕ ಸೇವಾ ಸ್ವರೂಪವನ್ನು ನಾಶಪಡಿಸಲಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವಿದ್ಯುತ್ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆಯಂತಹ ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಬಳಕೆದಾರರೆಲ್ಲರೂ ಬೃಹತ್ ಚಳವಳಿಯನ್ನು ಪ್ರಾರಂಭಿಸಬೇಕು ಎಂದು ಕರೆ ನೀಡಿದರು.

ಹರಿಯಾಣ ವಿದ್ಯುತ್ ಮಂಡಳಿಯ ಮಾಜಿ ಅಧ್ಯಕ್ಷ ಎಂ.ಜಿ.ದೇವಸಹಾಯಂ ಮಾತನಾಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣವು 30 ವಷರ್ಗಳ ಹಿಂದೆ ಪ್ರಾರಂಭವಾಗಿದ್ದು, ಅಧಿಕ ಲಾಭದ ಉದ್ದೇಶದಿಂದ ವಿದೇಶಿ ಹೂಡಿಕೆ ಆಕರ್ಷಿಸುವ ಗುರಿ ಹೊಂದಿದೆ. ಪ್ರಸ್ತುತ ಹಂತವು ರೈತರು ಮತ್ತು ವಸತಿ ಬಳಕೆದಾರರಿಗೆ ಅಡ್ಡ-ಸಬ್ಸಿಡಿಗಳನ್ನು ತೆಗೆದುಹಾಕಿ, ಬೆಲೆ ಹೆಚ್ಚಿಸುವ ಸ್ಮಾರ್ಟ್ ಮೀಟರ್‌ಗಳ ಬಳಕೆಯ ಬಲವಂತದ ಕಾರ್ಯವಿಧಾನವಾಗಿ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರವು ಸಾರ್ವಜನಿಕ ಉಪಯುಕ್ತತೆಯ ಪಾಲನ್ನು ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸುತ್ತಿದೆ, ಪರಿಣಾಮಕಾರಿಯಾಗಿ ವಿದ್ಯುತ್ ಅನ್ನು ‘ಸಾರ್ವಜನಿಕ ಕಲ್ಯಾಣಕ್ಕಾಗಿ ಹಾಗೂ ಸಾರ್ವಜನಿಕರ ಒಳಿತಿಗಾಗಿ’ ಎಂದಿದ್ದದ್ದನ್ನು, ಮಾರುಕಟ್ಟೆ ಶಕ್ತಿಗಳು ಬೆಲೆಯನ್ನು ನಿರ್ಧರಿಸುವ ‘ಖಾಸಗಿ ಕಲ್ಯಾಣಕ್ಕಾಗಿ ಹಾಗೂ ಖಾಸಗಿ ಒಳಿತಿಗಾಗಿ’ ಎಂಬುದಾಗಿ ಪರಿವರ್ತಿಸುತ್ತಿವೆ ಎಂದು ಎಂ.ಜಿ.ದೇವಸಹಾಯಂ ತಿಳಿಸಿದರು.

ತಮಿಳುನಾಡಿನ ಪವರ್ ಇಂಜಿನಿಯರ್ಸ್ ಸೊಸೈಟಿಯ ಅಧ್ಯಕ್ಷ ಎಸ್.ಗಾಂಧಿ ಮಾತನಾಡಿ, ವಿದ್ಯುತ್ ಹಂಚಿಕೆಯು ರಾಷ್ಟ್ರೀಯ ಸಂಪನ್ಮೂಲವಾಗಿದ್ದು, ಅದನ್ನು ಲಾಭಕ್ಕಾಗಿ ಖಾಸಗೀಕರಣ ಮಾಡಬಾರದು. ಕೇಂದ್ರ ಸರಕಾರ ಸ್ಮಾರ್ಟ್ ಮೀಟರ್ ಮತ್ತು ತಿದ್ದುಪಡಿ ಮಸೂದೆಯನ್ನು ಮಂಡಿಸುತ್ತಿರುವುದು ಇದು ಆರನೇ ಬಾರಿ. ಖಾಸಗಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯ ಒತ್ತಾಯವು ರಾಜ್ಯಗಳ ಮೇಲೆ ಭಾರೀ ಆರ್ಥಿಕ ಹೊರೆಯನ್ನು ಹೇರುತ್ತದೆ. ಇದು ಅಂತಿಮವಾಗಿ ತಿಂಗಳಿಗೆ 100 ಯೂನಿಟ್‌ಗಳಿಗಿಂತ ಕಡಿಮೆ ಬಳಸುವ 70 ಲಕ್ಷ ಕಡಿಮೆ ಆದಾಯದ ಗ್ರಾಹಕರನ್ನು ನಾಶಗೊಳಿಸಲಿದೆ ಎಂದರು.

ಸಮಾವೇಶದಲ್ಲಿ ಎಐಇಸಿಎ ಕಾರ್ಯಾಧ್ಯಕ್ಷ ಸಮರ್ ಸಿನ್ಹಾ, ಕೇರಳದ ಜನಕೀಯ ಪ್ರತಿರೋಧ ಸಮಿತಿ (ಜೆಪಿಎಸ್) ರಾಜ್ಯ ಉಪಾಧ್ಯಕ್ಷ ಬಿ.ದಿಲೀಪನ್, ಎಐಇಸಿಎ ಉಪಾಧ್ಯಕ್ಷ ಕೆ.ಸೋಮಶೇಖರ್, ಎಐಇಸಿಎ ಪ್ರಧಾನ ಕಾರ್ಯದರ್ಶಿ ಕೆ.ವೇಣುಗೋಪಾಲ್ ಭಟ್, ಹಲವರು ಭಾಗವಹಿಸಿದ್ದರು.

ನಿರ್ಣಯಗಳು

ವಿದ್ಯುತ್ ವಲಯದ ಖಾಸಗೀಕರಣ ನಿಲ್ಲಿಸಿ.

ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಪ್ರಸ್ತಾವಕ್ಕೆ ತಡೆಯೊಡ್ಡಿ.

ಟೈಮ್ ಆಫ್ ಡೇ ಸುಂಕವನ್ನು ಹಿಂಪಡೆಯಿರಿ.

ಕರ್ನಾಟಕದಲ್ಲಿ ಪ್ರತಿ ಯೂನಿಟ್‌ಗೆ 36 ಪೈಸೆಯ ಮೇಲುತೆರಿಗೆ ಮತ್ತು ಸ್ಥಿರ ಶುಲ್ಕಗಳ ಹೆಚ್ಚಳವನ್ನು ಹಿಂಪಡೆಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News