×
Ad

ಕೇಂದ್ರದ ಎಲೆಕ್ಟ್ರಿಕ್ ಬಸ್‍ಗಳ ನಿರ್ವಹಣೆಗೆ ಕಠಿಣ ನಿಯಮ ಜಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಗ್ರಹ

Update: 2025-10-27 23:29 IST

ಬೆಂಗಳೂರು : ಕೇಂದ್ರ ಸರಕಾರದ ಸೂಚನೆಯಂತೆ ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ (ಜಿಸಿಸಿ) ಅಡಿಯಲ್ಲಿ ಖಾಸಗಿ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ಪಡೆಯಲಾಗಿರುವ ಎಲೆಕ್ಟ್ರಿಕ್ ಬಸ್‍ಗಳ ಬಸ್ ಪೂರೈಕೆ, ನಿರ್ವಹಣೆಗೆ ಕಠಿಣ ನಿಯಮ ಜಾರಿಗೊಳಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಬಿಎಂಟಿಸಿಯಲ್ಲಿ ಸದ್ಯ 1,644 ಎಲೆಕ್ಟ್ರಿಕ್ ಬಸ್‍ಗಳು ಸೇವೆ ನೀಡುತ್ತಿವೆ. ಆದರೆ, ಆ ಬಸ್‍ಗಳು ಪದೇ ಪದೆ ಕೆಟ್ಟು ನಿಲ್ಲುತ್ತಿವೆ ಹಾಗೂ ಅದರ ಚಾಲಕರು ಬಸ್ ಪೂರೈಸಿದ ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಬಿಎಂಟಿಸಿ ಬಸ್ ಸೇವೆ ನೀಡುವಲ್ಲಿಯೂ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಎಲೆಕ್ಟ್ರಿಕ್ ಬಸ್ ನಿರ್ವಹಣೆ ಕುರಿತಂತೆ ಖಾಸಗಿ ಸಂಸ್ಥೆಗಳಿಗೆ ಕಠಿಣ ಸೂಚನೆ ನೀಡುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ಕೇಂದ್ರ ಸರಕಾರದ ಫೇಮ್ ಯೋಜನೆ ಅಡಿಯಲ್ಲಿ ನಗರ ಸಾರಿಗೆಗಳಿಗಾಗಿ ಎಲೆಕ್ಟ್ರಿಕ್ ಬಸ್‍ಗಳನ್ನು ಪಡೆಯಲಾಗುತ್ತಿದೆ. ಅವುಗಳನ್ನು ಜಿಸಿಸಿ ಮಾದರಿಯಲ್ಲಿ ಪಡೆಯಲಾಗುತ್ತಿದ್ದು, ಬಸ್‍ಗಳ ನಿರ್ವಹಣೆ, ಚಾಲಕರ ನೇಮಕ ಎಲ್ಲವೂ ಬಸ್ ಪೂರೈಸುವ ಖಾಸಗಿ ಸಂಸ್ಥೆಯ ಜವಾಬ್ದಾರಿಯಾಗಿದೆ.ಈ ಸಂಬಂಧ ಬಸ್‍ಗಳಿಂದಾಗಿರುವ ಸಮಸ್ಯೆಗಳ ಕುರಿತಂತೆ ಕೇಂದ್ರ ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆಯಲಾಗಿದೆ.

ಪತ್ರದಲ್ಲಿ ಎಲೆಕ್ಟ್ರಿಕ್ ಬಸ್‍ಗಳಿಂದಾಗುತ್ತಿರುವ ಸಮಸ್ಯೆಗಳನ್ನು ಅಂಕಿಅಂಶಗಳ ಸಹಿತ ತಿಳಿಸಲಾಗಿದೆ. ಬಿಎಂಟಿಸಿ ಹೆಸರು ಹಾಳಾಗುತ್ತಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಅದನ್ನು ಸರಿಪಡಿಸಲು ಜಿಸಿಸಿ ಮಾದರಿಯಲ್ಲಿ ಬಸ್ ಪೂರೈಸುವ ಸಂಸ್ಥೆಗಳ ಕಾರ್ಯಕ್ಷಮತೆ ಪರಿಶೀಲಿಸಿ ಆನಂತರ ಬಸ್ ಪೂರೈಕೆ ಆದೇಶ ನೀಡಬೇಕು. ವಿಶೇಷವಾಗಿ ಬಸ್‍ಗಳು ಬ್ರೇಕ್‍ಡೌನ್ ಆಗುವ ಪ್ರಮಾಣವನ್ನು ಪರಾಮರ್ಶಿಸಬೇಕು.

ಜತೆಗೆ ಸಂಸ್ಥೆಗಳು ನೇಮಿಸುವ ಚಾಲಕರಿಗೆ ಸಮಗ್ರ ಮತ್ತು ಪ್ರಮಾಣಿತ ತರಬೇತಿ ಕಾರ್ಯಕ್ರಮ ಕೈಗೊಳ್ಳುವುದು ಕಡ್ಡಾಯಗೊಳಿಸಬೇಕು. ಸುರಕ್ಷತೆ ಮತ್ತು ಸೇವಾ ಗುಣಮಟ್ಟದ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಜಂಟಿಯಾಗಿ ಯೋಜನೆ ರೂಪಿಸಬೇಕು ಎಂದು ಪತ್ರದ ಮೂಲಕ ತಿಳಿಸಲಾಗಿದೆ. ಶೀಘ್ರದಲ್ಲಿ ಕುಮಾರಸ್ವಾಮಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಯೂ ಮನವಿ ಮಾಡಲಾಗುವುದು ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

ಬರೋಬ್ಬರಿ 2,049 ಬಾರಿ ಬ್ರೇಕ್ ವೈಫಲ್ಯ: ಬಿಎಂಟಿಸಿಗೆ ಎನ್‍ಟಿಪಿಸಿ ಸಂಸ್ಥೆಯಿಂದ 90, ಸ್ವಿಚ್ ಮೊಬಿಲಿಟಿ 300, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ಸ್‍ನಿಂದ 1,031 ಹಾಗೂ ಒಎಚ್‍ಎಂ ಗ್ಲೋಬಲ್ ಮೊಬಿಲಿಟಿ ಪ್ರ್ರೈ.ಲಿ.ನಿಂದ 251 ಬಸ್‍ಗಳು ಪೂರೈಕೆಯಾಗಿವೆ. ಈ ನಾಲ್ಕೂ ಸಂಸ್ಥೆಗಳಿಂದ ಪೂರೈಕೆಯಾದ ಬಸ್‍ಗಳಿಂದ ಈವರೆಗೆ 2049 ಬಾರಿ ಬ್ರೇಕ್ ವೈಫಲ್ಯ ಕಂಡುಬಂದಿದೆ.

ಬ್ಯಾಟರಿ ಕಾರಣದಿಂದಾಗಿ 14,082 ಬಾರಿ ಅವಘಡ ಸಂಭವಿಸಿವೆ. ಅದರ ಜತೆಗೆ ವಿವಿಧ ಕಾರಣಕ್ಕಾಗಿ 25.51 ಕೋಟಿ ರೂ., ದಂಡ ವಿಧಿಸಲಾಗಿದೆ. ಹೀಗೆ ಬಸ್‍ಗಳು ಪದೇಪದೆ ಬ್ರೇಕ್ ವೈಫಲ್ಯ ಆಗುವ ಕಾರಣಕ್ಕಾಗಿ ಬಸ್‍ಗಳ ಸೇವೆ ನಿಲ್ಲಿಸಬೇಕಾಗುತ್ತದೆ. ಇದರಿಂದಾಗಿ ಬಿಎಂಟಿಸಿ ಕಾರ್ಯಾಚರಣೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News