ಮಹಿಳೆಯ ಮೇಲೆ ಅತ್ಯಾಚಾರ ಆರೋಪ: ಯುವಕನ ವಿರುದ್ಧದ ಎಫ್‌ಐಆರ್ ರದ್ದು
ಬೆಂಗಳೂರು : ಪರಸ್ಪರ ಇಚ್ಛೆಯಿಂದ ಹುಟ್ಟಿದ ಸಂಬಂಧವನ್ನು ಅಪರಾಧವಾಗಿ ಪರಿವರ್ತಿಸಲಾಗದು ಎಂದಿರುವ ಹೈಕೋರ್ಟ್, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಿತರಾಗಿ, ಆತ್ಮೀಯತೆ ಬೆಳೆಸಿಕೊಂಡ ನಂತರ ಓಯೋ ರೂಮ್‌ನಲ್ಲಿ ಪರಸ್ಪರ ಒಪ್ಪಿಗೆ ಮೇಲೆ ಲೈಂಗಿಕ ಕ್ರಿಯೆ ನಡೆಸಿದ ಯುವಕನ ವಿರುದ್ಧ ಮಹಿಳೆ ನೀಡಿದ್ದ ದೂರು ಆಧರಿಸಿ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಈ ಎಫ್‌ಐಆರ್ ರದ್ದು ಕೋರಿ ಬನ್ನೇರುಘಟ್ಟ ರಸ್ತೆಯ ಅವನಿ ಶೃಂಗೇರಿ ನಗರದ 23 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪರಸ್ಪರ ಇಚ್ಛೆಯಿಂದ ಹುಟ್ಟಿದ ಸಂಬಂಧ, ಅದು ನಿರಾಶೆಯಲ್ಲಿ ಸ್ಥಾಪಿತವಾದರೂ, ಸ್ಪಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಹೇಳಿದ್ದೇನು?
ಪ್ರಕರಣದಲ್ಲಿ ಮಹಿಳೆ ದಾಖಲಿಸಿದ್ದ ದೂರು, ತನಿಖೆ ನಡೆಸಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿ ಮತ್ತು ದೂರುದಾರ ಮಹಿಳೆ ಮತ್ತು ಆರೋಪಿಯ ನಡುವಿನ ಸಂದೇಶದ (ಚಾಟ್) ವಿವರಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಆರೋಪಿ ಮತ್ತು ದೂರುದಾರೆಯ ನಡುವಿನ ಸಂದೇಶಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಅವರ ನಡುವಿನ ಎಲ್ಲ ಕೃತ್ಯಗಳು ಸಮ್ಮತಿಯಿಂದ ಕೂಡಿವೆ ಎಂಬುದನ್ನು ಮಾತ್ರ ಸೂಚಿಸುತ್ತದೆ. ಪ್ರಸ್ತುತ ಅರ್ಜಿದಾರನ ವಿರುದ್ಧ ವಿಚಾರಣೆಗೆ ಅವಕಾಶ ನೀಡಿದರೆ ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರ ಯುವಕನ ವಿರುದ್ಧದ ಎಫ್‌ಐಆರ್ ರದ್ದುಪಡಿಸಿ ಆದೇಶಿಸಿದೆ.