×
Ad

ನಮ್ಮ ನೀರಾವರಿ ಯೋಜನೆಗಳ ಪರ ಕೋರ್ಟ್ ತೀರ್ಪಿದ್ದರೂ ಕೇಂದ್ರದ ಅಸಹಕಾರದಿಂದ ಅನುಷ್ಠಾನ ಸ್ಥಗಿತ : ಡಿ.ಕೆ.ಶಿವಕುಮಾರ್

Update: 2025-11-14 22:55 IST

ಬೆಂಗಳೂರು: “ಕೃಷ್ಣಾ, ಮಹದಾಯಿ ಸೇರಿದಂತೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪರ ನ್ಯಾಯಾಲಯದ ತೀರ್ಪು ಬಂದಿದ್ದರೂ ಅಧಿಸೂಚನೆ ಹೊರಡಿಸದ, ಅನುಮತಿ ನೀಡದ ಕೇಂದ್ರ ಸರ್ಕಾರದ ಅಸಹಕಾರದಿಂದ ಈ ಯೋಜನೆಗಳು ಸ್ಥಗಿತಗೊಂಡಿವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.

ತಾವು ರಚಿಸಿರುವ 'ನೀರಿನ ಹೆಜ್ಜೆ' ಕೃತಿಯನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದರು.

“ಕೃಷ್ಣಾ ನದಿ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸುತ್ತಿಲ್ಲ. ಅಂದು ಯೋಜನೆಗೆ ಒಪ್ಪಿದ್ದ ಮಹಾರಾಷ್ಟ್ರ ಇಂದು ವಿರೋಧ ವ್ಯಕ್ತಪಡಿಸುತ್ತಿದೆ. ಮಹದಾಯಿ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದರೂ ಅನುಷ್ಠಾನ ಆಗಿಲ್ಲ. ಗೋವಾದಲ್ಲಿ ಒಬ್ಬ ಸಂಸದ ಇದ್ದಾನೆ. ನಮ್ಮಲ್ಲಿ 28 ಸಂಸದರಿದ್ದರೂ ನಮ್ಮ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಈ ಯೋಜನೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಆದರೆ ಕೇಂದ್ರದ ಅರಣ್ಯ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ” ಎಂದರು.

“ರಾಜ್ಯದ ಪ್ರಮುಖ ಕೃಷ್ಣಾ, ಮಹದಾಯಿ, ತುಂಗಭದ್ರಾ, ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕೇಂದ್ರದ ಮಂತ್ರಿಗಳನ್ನು ಐದು ಬಾರಿ ಭೇಟಿ ಮಾಡಿದ್ದೇನೆ. ಯಾವುದೇ ಫಲಿತಾಂಶ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದ ಹಿತ ಕಾಪಾಡುವುದು ಹೇಗೆ?” ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಸದರು ಧ್ವನಿ ಎತ್ತುತ್ತಿಲ್ಲ:

“ಕೇಂದ್ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರ ಅಧಾರದ ಮೇಲೆ ಬೊಮ್ಮಾಯಿ ಅವರು ಕೂಡ ರಾಜ್ಯ ಬಜೆಟ್ ನಲ್ಲಿ ಅನುದಾನ ತೋರಿಸಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ. ಈ ಬಗ್ಗೆ ಪ್ರಶ್ನೆ ಮಾಡುವ ಆತ್ಮಸ್ಥೈರ್ಯ ಬಿಜೆಪಿಯ ಯಾವ ಸಂಸದರಿಗೂ ಇಲ್ಲ. ಅವರು ರಾಜ್ಯದ ಪರ ಒಂದೇ ಒಂದು ಮಾತು ಆಡಿಲ್ಲ. ಅಷ್ಟಾದರೂ ಇವರು ಸಂಸದರಾಗಿ ಹೇಗೆ ಮುಂದುವರಿಯುತ್ತಿದ್ದಾರೆ ಎಂಬುದೇ ನನಗೆ ಅರಿವಾಗುತ್ತಿಲ್ಲ. ಕೇವಲ ರಾಜ್ಯ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನೆರೆಯ ತಮಿಳುನಾಡು, ಆಂಧ್ರ ಪ್ರದೇಶದವರು ತಮ್ಮ ರಾಜ್ಯದ ವಿಚಾರ ಬಂದಾಗ ಪಕ್ಷಬೇಧ ಮರೆತು ಒಂದಾಗಿ ಧ್ವನಿ ಎತ್ತುತ್ತಾರೆ. ನಮ್ಮ ಕೈಯಲ್ಲಿ ಎಷ್ಟು ದಿನ ಅಧಿಕಾರ ಇರುತ್ತದೆ ಎಂಬುದಕ್ಕಿಂತ, ಅಧಿಕಾರ ಇದ್ದಷ್ಟು ದಿನ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ಕಿಡಿಕಾರಿದರು.

“ನೀರು ಎಲ್ಲರಿಗೂ ಬೇಕು. ಬೆಂಗಳೂರು ಅಷ್ಟು ದೊಡ್ಡದಾಗಿ ಬೆಳೆಯಲು ಕಾರಣ ನೀರು. ಬೆಂಗಳೂರು ಜಾಗತಿಕ ನಗರ ಎಂದು ವಾಜಪೇಯಿ ಅವರು ತಿಳಿಸಿದ್ದರು. ಈ ರಾಜ್ಯದಲ್ಲಿ ಮಹರಾಜರು ಕಟ್ಟಿದ ಅಣೆಕಟ್ಟುಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಣೆಕಟ್ಟುಗಳು ನಿರ್ಮಾಣವಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ನನಗೆ ರಾಜಕಾರಣ ಮಾತನಾಡಲು ಇಷ್ಟವಿಲ್ಲ. ಆದರೂ ಕಾಂಗ್ರೆಸ್ ಬಿಟ್ಟು ಬೇರೆ ಸರ್ಕಾರಗಳು ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ನಿರ್ಮಿಸಿದೆಯೇ?” ಎಂದು ಪ್ರಶ್ನಿಸಿದರು.

10 ನದಿ ವಿವಾದಗಳ ಪೈಕಿ ಕರ್ನಾಟಕದ್ದೇ 5 ನದಿ ವಿವಾದಗಳಿವೆ:

“ನೆಹರೂ ಅವರು ಅಣೆಕಟ್ಟುಗಳೇ ಆಧುನಿಕ ಭಾರತದ ದೇವಾಲಯ ಎಂದು ಕರೆದರು. ಅವರು ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಸಂದರ್ಭ ಕರ್ನಾಟಕಕ್ಕೆ ನೀಡಿ, ನೆರವು ಕೊಟ್ಟಿದ್ದರು. ದೇಶದಲ್ಲಿರುವ 10 ನದಿ ವಿವಾದಗಳ ಪೈಕಿ ಐದು ಕರ್ನಾಟಕದ್ದೇ ಆಗಿವೆ. ಈ ಬಗ್ಗೆ ಪುಸ್ತಕದಲ್ಲಿ ತಿಳಿಸಿದ್ದೇನೆ” ಎಂದರು.

“ರಾಜ್ಯದಲ್ಲಿ ಪ್ರತ್ಯೇಕ ಜಲ ಆಯೋಗ ಸ್ಥಾಪಿಸಲಾಗುವುದು. ನೀರಾವರಿಯಿಂದ ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ನೀರು ಒದಗಿಸುವ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗದ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News