×
Ad

ವ್ಯವಸ್ಥೆ, ಲೋಪಗಳ ಅಧ್ಯಯನ | ಪರಪ್ಪನ ಅಗ್ರಹಾರಕ್ಕೆ ಉನ್ನತಾಧಿಕಾರ ಸಮಿತಿ ಭೇಟಿ ಪರಿಶೀಲನೆ

Update: 2025-11-15 18:48 IST

ಬೆಂಗಳೂರು : ಕಾರಾಗೃಹಗಳಲ್ಲಿ ವ್ಯವಸ್ಥೆಗಳು ಹಾಗೂ ಲೋಪಗಳ ಅಧ್ಯಯನಕ್ಕಾಗಿ ರಚಿಸಲಾಗಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಶನಿವಾರ ನಗರದ ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ, ಬಂಧಿಖಾನೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿತು. ಬಳಿಕ ಜೈಲಿನ ಒಳಗೆ ಹಾಗೂ ಬ್ಯಾರಕ್‍ಗಳ ಖುದ್ದು ಪರಿಶೀಲನೆ ನಡೆಸಿದರು.

ಜೈಲಿನಲ್ಲಿ ಕೈದಿಗಳನ್ನು ಭೇಟಿ ಮಾಡಲು ಸಾರ್ವಜನಿಕರಿಗೆ ಇರುವ ವ್ಯವಸ್ಥೆಗಳು, ಸಿಸಿಟಿವಿ, ಜಾಮರ್ ಸೇರಿದಂತೆ ಇತರ ಸಲಕರಣೆಗಳ ಕಾರ್ಯಕ್ಷಮತೆ, ಅಧಿಕಾರಿ ಮತ್ತು ಸಿಬ್ಬಂದಿಗಳ ಹೊಣೆಗಾರಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ.

ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದಲ್ಲಿರುವ ಜೈಲುಗಳ ವ್ಯವಸ್ಥೆಗಳ ಪರಿಶೀಲನೆ ನಡೆಸಿ ವರದಿ ನೀಡಲು ಸಮಿತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಅಧಿಕಾರಿಗಳು ಜೈಲುಗಳ ಭೇಟಿಗೆ ಮುಂದಾಗಿದ್ದಾರೆ.

ಜೈಲುಗಳಲ್ಲಿ ವಿಚಾರಣಾಧೀನ ಹಾಗೂ ಶಿಕ್ಷಾಬಂಧಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಅದಕ್ಕೆ ಪೂರಕವಾಗಿ ಇತ್ತೀಚಿಗೆ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬ್ಯಾರಕ್ ನಂ-7ರ 8ನೆ ಕೊಠಡಿಯಲ್ಲಿ ಕೆಲವು ವಿಚಾರಣಾಧೀನ ಕೈದಿಗಳು ಮದ್ಯ ಸೇವಿಸಿ ಸಾಮೂಹಿಕ ನೃತ್ಯ ಮಾಡುತ್ತಿರುವುದು ಹಾಗೂ ವಿಕೃತಕಾಮಿ ಉಮೇಶ್‍ರೆಡ್ಡಿ ಮೊಬೈಲ್‍ನಲ್ಲಿ ಮಾತನಾಡುತ್ತಿರುವುದು, ಭಯೋತ್ಪಾದನೆ ಆರೋಪದ ಮೇಲೆ ಬಂಧಿತನಾಗಿರುವ ವ್ಯಕ್ತಿಯ ಕೈಯಲ್ಲೂ ಮೊಬೈಲ್ ಇರುವುದು ವೈರಲ್ ಆದ ವಿಡಿಯೊಗಳಲ್ಲಿ ಕಂಡು ಬಂದಿತ್ತು.

ಇದು ವ್ಯಾಪಕ ಚರ್ಚೆ ಹುಟ್ಟು ಹಾಕಿದ್ದಲ್ಲದೇ, ಗಂಭೀರ ಸ್ವರೂಪದ ಭದ್ರತಾ ಲೋಪಗಳನ್ನು ಎತ್ತಿ ತೋರಿಸಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಂಧಿಖಾನೆ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ ನೇತೃತ್ವದಲ್ಲಿ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳ ಉನ್ನತಾಧಿಕಾರ ಸಮಿತಿ ರಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News