ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿ; ತಾತ್ಕಾಲಿಕ ಅಂಕಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಬೆಂಗಳೂರು : ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಅಂತಿಮ ಕೀ ಉತ್ತರ ಹಾಗೂ ತಾತ್ಕಾಲಿಕ ಅಂಕ ಪಟ್ಟಿಗೆ ಜ.1ರ ಮಧ್ಯಾಹ್ನ 12ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಜೂ.22ರಿಂದ ಡಿ.24 ರವರೆಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ದಿನಾಂಕ ಡಿ.23ರಂದು ಪ್ರಕಟಿಸಿ ಡಿ.25ರ ಸಂಜೆ 5ಗಂಟೆಯೊಳಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ, ವಿಷಯ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಡಿ.29ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.
ಅಂತಿಮ ಕೀ ಉತ್ತರಗಳನ್ನು ಹಾಗೂ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ತಾತ್ಕಾಲಿಕ ಅಂಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು, ತಾತ್ಕಾಲಿಕ ಅಂಕ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಜ.1ರ ಮಧ್ಯಾಹ್ನ 12ಗಂಟೆಯೊಳಗೆ https://cetonline.karnataka.gov.in/kea/ ವೆಬ್‍ಸೈಟ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಪೂರಕ ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.