ಅಂದರ್-ಬಾಹರ್ ಆಡುವುದು ಅಪರಾಧ; ಹೈಕೋರ್ಟ್ ಮೌಖಿಕ ಅಭಿಪ್ರಾಯ
ಬೆಂಗಳೂರು : ಇಸ್ಪೀಟ್‌ನಲ್ಲಿ ರಮ್ಮಿ ಕೌಶಲದ ಆಟ (ಸ್ಕಿಲ್ ಗೇಮ್) ಆಗಿದ್ದು, ಅಂದರ್-ಬಾಹರ್ ಮಾತ್ರ ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಂದರ್-ಬಾಹರ್ ಆಟವಾಡುತ್ತಿದ್ದ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದರೆಯ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದು ಕೋರಿ ಪ್ರಕರಣದ 5 ಮತ್ತು 7ನೇ ಆರೋಪಿಗಳಾದ ಸಂತೋಷ್ ಮತ್ತು ಜಯರಾಜ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಆರ್. ಬಾಲಕೃಷ್ಣ ವಾದ ಮಂಡಿಸಿ, ಅಂದರ್-ಬಾಹರ್ ಆಟವಾಡುತ್ತಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ದೂರು ದಾಖಲಾಗಿದೆ. ಆದರೆ, ಅಂದರ್-ಬಾಹರ್ ಕೂಡ ರಮ್ಮಿಯಂತೆಯೇ ಕೌಶಲದ ಆಟವಾಡಿದೆ. ಇದರಿಂದ, ಕರ್ನಾಟಕ ಪೊಲೀಸ್ ಕಾಯ್ದೆ-1963 ಅಡಿ ಸೆಕ್ಷನ್ 79 ಮತ್ತು 80 ಅಡಿಯಲ್ಲಿ ಅರ್ಜಿದಾರರ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ರಮ್ಮಿ ಕೌಶಲದ ಆಟವಾಗಿದೆ. ರಮ್ಮಿ ಆಡಿದರೆ ಅದು ಅಪರಾಧವಾಗುತ್ತಿಲ್ಲ. ಅಂದರ್-ಬಾಹರ್ ಆಯ್ಕೆಯ ಆಟವಾಗಿದೆ. ಅಂದರ್-ಬಾಹರ್ ಆಡಿದರೆ ಅದು ಅಪರಾಧವಾಗುತ್ತದೆ ಎಂದು ಮೌಖಿಕವಾಗಿ ಹೇಳಿದರು. ಅದಕ್ಕೆ ಅರ್ಜಿದಾರರ ಪರ ವಕೀಲರು, ಅಂದರ್-ಬಾಹರ್ ಸಹ ಕೌಶಲದ ಆಟವಾಗಿದೆ. ಈ ಕುರಿತು ಹೈಕೋರ್ಟ್ ಸಮನ್ವಯ ಪೀಠ ಈ ಹಿಂದೆಯೇ ಆದೇಶ ಮಾಡಿದೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೂ; ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಜತೆಗೆ, ಪ್ರತಿವಾದಿಗಳಾದ ಮುಲ್ಕಿ ಠಾಣೆ ಪೊಲೀಸರು ಮತ್ತು ಪ್ರಕರಣದ ದೂರುದಾರರಾದ ಸಿಸಿಬಿ ಸಬ್ ಇನ್‌ಸ್ಪೆಕ್ಟರ್ ಕಬಲ್ ರಾಜ್‌ಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
2020ರ ಆಗಸ್ಟ್ 16ರಂದು ಅರ್ಜಿದಾರರು ಮತ್ತು ಇತರ ಆರೋಪಿಗಳು ಮಂಗಳೂರಿನ ಮುಲ್ಕಿ ಪಕ್ಷಿಕೆರೆ ಚರ್ಚ್ ಬಳಿಯ ಮೌಂಟ್ ವಿಲ್ಲಾ ಮನೆಯಲ್ಲಿ ಅಂದರ್-ಬಾಹರ್ ಆಟವಾಡುತ್ತಿದ್ದರು. ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಹಣ, ಮೊಬೈಲ್ ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದರು.
ನಂತರ ಸಿಸಿಬಿ ಸಬ್ ಇನ್‌ಸ್ಪೆಕ್ಟರ್ ಕಬಲ್ ರಾಜ್ ಅವರು ನೀಡಿದ್ದ ದೂರು ಆಧರಿಸಿ ಅರ್ಜಿದಾರರೂ ಸೇರಿದಂತೆ ಒಟ್ಟು 14 ಆರೋಪಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಸದ್ಯ ಪ್ರಕರಣವನ್ನು ಮೂಡಬಿದರೆಯ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದಾರೆ.