×
Ad

Bengaluru | ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಹಾಕಿದ ಪ್ರಯಾಣಿಕ; ಪ್ರಕರಣ ದಾಖಲು

Update: 2026-01-30 22:46 IST

ಬೆಂಗಳೂರು : ಇಲ್ಲಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಹುಸಿ ಬಾಂಬ್ ಬೆದರಿಕೆ ಹಾಕಿದ ಸನ್ನಿವೇಶ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಠಿಯಾದ ಘಟನೆ ಶುಕ್ರವಾರ ವರದಿಯಾಗಿದೆ.

ಬೆಂಗಳೂರಿನಿಂದ ಅಹಮದಾಬಾದ್‍ಗೆ ತೆರಳಲು ಆಗಮಿಸಿದ್ದ ಪ್ರಯಾಣಿಕನೊಬ್ಬ ತನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದಾನೆ.

ಆರೋಪಿಯನ್ನು ಬೆಂಗಳೂರು ಮೂಲದ ಅಬು ಅಖಿಲ್ ಅಝರ್‌ಚಾದ್ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ವಿಮಾನ ನಿಲ್ದಾಣ ಪ್ರವೇಶದ ವೇಳೆ ಭದ್ರತಾ ನಿಯಮಾನುಸಾರ ಎರಡು ಹಂತಗಳಲ್ಲಿ ಬ್ಯಾಗ್ ಪರಿಶೀಲನೆ ನಡೆಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಆರೋಪಿ ಅಬು ಅಖಿಲ್ ತನ್ನ ಬ್ಯಾಗ್‍ನಲ್ಲಿ ಎರಡು ಸಣ್ಣ ಬಾಂಬ್‍ಗಳಿವೆ ಎಂದು ಹೇಳಿ ಭದ್ರತಾ ಸಿಬ್ಬಂದಿಯನ್ನು ಬೆದರಿಸಿದ್ದಾನೆ ಎನ್ನಲಾಗಿದೆ.

ಬಾಂಬ್ ಬೆದರಿಕೆ ವಿಚಾರ ತಿಳಿದ ತಕ್ಷಣವೇ ಎಚ್ಚೆತ್ತ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು, ಬ್ಯಾಗ್ ಅನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಪರಿಶೀಲನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ, ವಿಮಾನ ನಿಲ್ದಾಣದ ಭದ್ರತೆಗೆ ಗಂಭೀರ ಬೆದರಿಕೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಈ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News