ರಾಜ್ಯಕ್ಕೆ 1.25 ಲಕ್ಷ ಕೋಟಿ ರೂ.ನಷ್ಟ ಉಂಟಾಗಲು ಕಾಂಗ್ರೆಸ್ ಸರಕಾರ ಕಾರಣ : ವೇದವ್ಯಾಸ ಕಾಮತ್
ಬೆಂಗಳೂರು : ರಾಜ್ಯಕ್ಕೆ 15ನೆ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲ ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ. ಈ ನಷ್ಟಕ್ಕೆ ಕೇಂದ್ರ ಸರಕಾರವಲ್ಲ, ರಾಜ್ಯದ ಕಾಂಗ್ರೆಸ್ ಸರಕಾರವೃ ಕಾರಣ ಎಂದು ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ದೂರಿದರು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾ.ಪಂ.ಯಿಂದ ಜಿಲ್ಲಾ ಪಂಚಾಯಿತಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳನ್ನೆ ಈ ಸರಕಾರ ನಡೆಸಿಲ್ಲ. ಸ್ಥಳೀಯ ಮಟ್ಟದಲ್ಲಿ ಚುನಾಯಿತ ಸಂಸ್ಥೆಗಳು ಇರದೆ ಅನುದಾನ ಪಡೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಸರಕಾರ ಸ್ಥಳೀಯ ಚುನಾವಣೆಗಳನ್ನು ನಡೆಸದೆ ಹೋದರೆ, 15ನೆ ಹಣಕಾಸು ಆಯೋಗದಲ್ಲಿ ನಷ್ಟ ಉಂಟಾಗಿರುವುದಲ್ಲ, 16ನೆ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಬರಬೇಕಾದ ಅನುದಾನ ಕೈ ತಪ್ಪುತ್ತದೆ. ಅದಕ್ಕೆ ಈ ಸರಕಾರದ ನಿರ್ಲಕ್ಷ್ಯ ಕಾರಣವಾಗುತ್ತದೆ ಎಂದು ವೇದವ್ಯಾಸ ಕಾಮತ್ ದೂರಿದರು.
ನನ್ನ ಕ್ಷೇತ್ರದಲ್ಲಿ ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಕಾಮಗಾರಿಗೆ ಶಿಲಾನ್ಯಾಸ ಮಾಡಿಲ್ಲ. ಅಭಿವೃದ್ಧಿಗೆ ಒಂದು ರೂಪಾಯಿ ನೀಡಿಲ್ಲ. ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣದಲ್ಲಿ ಭಾರಿ ಭ್ರಷ್ಟಾಚಾರ ಆಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ 40 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ನೀಡಿಲ್ಲ. ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂ.ಬಾಕಿ ನೀಡದಷ್ಟು ಈ ಸರಕಾರ ದಿವಾಳಿಯಾಗಿದೆ. ಎರಡೂವರೆ ವರ್ಷದಿಂದ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಭ್ರಷ್ಟಾಚಾರ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಅಧಿಕಾರಿಗಳು ಆಯಾಕಟ್ಟಿನ ಜಾಗಕ್ಕೆ ಕೋಟ್ಯಂತರ ರೂ.ಗಳನ್ನು ಪಾವತಿಸಿ ಬಂದಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ಆಗುತ್ತಿವೆ. ಸರಕಾರಿ ಕಚೇರಿಗಳಲ್ಲಿನ ಹೊಸ ನಿಯಮಗಳಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ಮಂಗಳೂರು ಜೈಲಿನಲ್ಲಿ ಅಳವಡಿಸಿರುವ ಜಾಮರ್‍ನಿಂದಾಗಿ ಸುತ್ತಲಿನ 2.5 ಕಿ.ಮೀ ಪರಿಸರದಲ್ಲಿ ಸಮಸ್ಯೆ ಉಂಟಾಗಿದೆ. ಜಾಮರ್ ಅನ್ನು ತೆರವು ಮಾಡಿ ಎಂದು ಸರಕಾರಕ್ಕೆ ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ನಗರದಲ್ಲಿ ಡ್ರಗ್ಸ್ ಹಾವಳಿಯನ್ನು ನಿಯಂತ್ರಿಸಲು ಪ್ರಯತ್ನಿಸುವ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ದೂರಿದರು.
ಮಂಗಳೂರಿನಲ್ಲಿ ಮೀನುಗಾರರ ಸುರಕ್ಷತೆಗಾಗಿ ‘ಸೀ ಆ್ಯಂಬುಲೆನ್ಸ್’ ಒದಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ದುರ್ಬೀನು ಹಾಕಿ ಹುಡುಕಿದರೂ ನಮಗೆ ಅದು ಕಾಣಿಸುತ್ತಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದರು.