×
Ad

ನೇರವಾಗಿ ಚರ್ಚೆ ಮಾಡುವ ಬದಲು ಟ್ವೀಟ್ ಮಾಡುತ್ತಲೇ ಇರುತ್ತೀರಾ? : ಉದ್ಯಮಿ ಮೋಹನ್ ದಾಸ್ ಪೈಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

Update: 2026-01-30 22:38 IST

ಬೆಂಗಳೂರು : ‘ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆ ಮಾಡಲು ನಮ್ಮ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ವ್ಯವಸ್ಥಾಪಕ ನಿರ್ದೇಶಕರೇ ಸಾಕು. ತಾವು ಬಂದು ವಾಸ್ತವಾಂಶಗಳನ್ನು ನೇರವಾಗಿ ಅವರೊಂದಿಗೆ ಚರ್ಚಿಸಿ. ಅದನ್ನು ಬಿಟ್ಟು ನಿರಂತರವಾಗಿ ಟ್ವೀಟ್ ಮಾಡುತ್ತಲೇ ಇರುತ್ತೀರಾ?’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉದ್ಯಮಿ ಮೋಹನ್ ದಾಸ್ ಪೈ ಅವರನ್ನು ಪ್ರಶ್ನಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ರಾಮಲಿಂಗಾರೆಡ್ಡಿ, ‘ನಿಮ್ಮ(ಮೋಹನ್‍ದಾಸ್ ಪೈ) ದೃಷ್ಟಿಕೋನವು ಕೇವಲ ಪಕ್ಷಪಾತವಲ್ಲ, ಅದು ಮೂಲಭೂತವಾಗಿ ಹಠಮಾರಿ ಧೋರಣೆಯನ್ನು ಹೊಂದಿದೆ. ನೀವು ಬ್ಯಾಲೆನ್ಸ್ ಶೀಟ್ ಅನ್ನು ನೋಡುತ್ತೀರಿ. ಆದರೆ ನಾನು 1.5 ಕೋಟಿ ನಾಗರಿಕರನ್ನು ನೋಡುತ್ತೇನೆ ಎಂದು ಉಲ್ಲೇಖಿಸಿದ್ದಾರೆ.

‘ನಾವು ಮಹಿಳೆಯರಿಗೆ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ಯ ಮೂಲಕ ಮಹಿಳೆಯರಿಗೆ 650 ಕೋಟಿಗೂ ಅಧಿಕ ಉಚಿತ ಪ್ರಯಾಣವನ್ನು ನೀಡಿದ್ದೇವೆ. ಇದು ಕೇವಲ ‘ಯೋಜನೆ’ ಅಲ್ಲ, ಬದಲಾಗಿ ಭಾರತದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಚಲನಶೀಲತೆಯ ನೇತೃತ್ವದ ಆರ್ಥಿಕ ಸಬಲೀಕರಣವಾಗಿದೆ’ ಎಂದು ಅವರು ಗಮನ ಸೆಳೆದಿದ್ದಾರೆ.

‘ರಾಜ್ಯದಲ್ಲಿ ಶೇ.98 ಹಳ್ಳಿಗಳು ಬಸ್ ಸಂಪರ್ಕವನ್ನು ಹೊಂದಿವೆ. ದೂರದ ಹಳ್ಳಿಯ ವಿದ್ಯಾರ್ಥಿ ಮತ್ತು ಗ್ರಾಮೀಣ ನಾಗರಿಕರಿಗೆ ಬಸ್ ಸೇವೆಯನ್ನು ಕಲ್ಪಿಸುತ್ತಿರುವುದರಿಂದ ಶೇ.30ರಷ್ಟು ಮಾರ್ಗಗಳಲ್ಲಿ ನಷ್ಟವಾಗುತ್ತಿವೆ. ಶೇ.30ರಷ್ಟು ಲಾಭವೂ ಇಲ್ಲ ನಷ್ಟವೂ ಇಲ್ಲದಂತಾಗಿದೆ. ಉಳಿದ ಶೇ.40ರಷ್ಟು ಪ್ರಯಾಣದ ಮಾರ್ಗಗಳು ಲಾಭವನ್ನು ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ 26,054 ಸರಕಾರಿ ಬಸ್‍ಗಳನ್ನು ಕಾರ್ಯಚರಣೆ ನಡೆಸುತ್ತಿವೆ. ಬೆಂಗಳೂರಿನಲ್ಲಿಯೇ ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. ನಗರದಲ್ಲಿ 1,686 ಎಲೆಕ್ಟ್ರಿಕ್ ಬಸ್‍ಗಳನ್ನು ಒಳಗೊಂಡಂತೆ 7,108 ಬಸ್‍ಗಳಲ್ಲಿ ಪ್ರಯಾಣಿಕರು ಪ್ರಯಾಣಿಸಲಿದ್ದು, ಇದು ಭಾರತದಲ್ಲಿಯೇ ದಾಖಲೆಯನ್ನು ಸೃಷ್ಟಿಸಿದೆ. ಈ ಪ್ರಮಾಣ ಮತ್ತು ದಕ್ಷತೆಗೆ ಹೊಂದಿಕೆಯಾಗುವ ಪ್ರಧಾನಿ ಮೋದಿಯವರ ತವರು ರಾಜ್ಯ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ಒಂದೇ ಒಂದು ನಗರ ಅಥವಾ ರಾಜ್ಯವನ್ನು ನನಗೆ ತೋರಿಸಿ ಎಂದು ಅವರು ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ಖಾಸಗಿ ಮಾಲತ್ವದಲ್ಲಿ ನಡೆಯುವ ಉದ್ಯಮಗಳು ಲಾಭದ ಕುಸಿತ ಕಂಡ ತಕ್ಷಣ ಮುಚ್ಚುತ್ತವೆ. ಆದರೆ ದಿನಗೂಲಿ ಪಡೆಯುವ ಬೆಂಗಳೂರಿನ ಸಾಮಾನ್ಯ ವ್ಯಕ್ತಿಗೆ ಅದು ಹೇಗೆ ಸಹಾಯ ಮಾಡುತ್ತದೆ? ಖಾಸಗಿ ಏಕಸ್ವಾಮ್ಯವು ಬಡವರ ಮೇಲೆ ಹೊರೆ ಹಾಕಲಿದೆ. ಸಾರ್ವಜನಿಕ ಸಾರಿಗೆ ಒಂದು ಹಕ್ಕು, ಐಷಾರಾಮಿ ಅಲ್ಲ ಅವರು ಹೇಳಿದ್ದಾರೆ.

‘ಬಿಜೆಪಿ ಅಧಿಕಾರಾವಧಿಯಲ್ಲಿ (2019-2023), ಸಾರಿಗೆ ನಿಗಮಗಳು ಶೋಚನೀಯ ಸ್ಥಿತಿಯಲ್ಲಿದ್ದಾಗ, ನೀವು ಒಂದೇ ಒಂದು ಪ್ರಶ್ನೆಯನ್ನು ಏಕೆ ಎತ್ತಲಿಲ್ಲ? ಜನಪರ ಸರಕಾರ ಕಾರ್ಯನಿರ್ವಹಿಸುತ್ತಿರುವಾಗ ಮಾತ್ರ ನಿಮ್ಮ ‘ಕಾರ್ಪೊ ರೇಟ್ ಕಾಳಜಿ’ ಏಕೆ ಎಚ್ಚೆತ್ತುಕೊಳ್ಳುತ್ತದೆ?’

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಬಸ್‍ಗಳ ಕೊರತೆ ಮತ್ತು ಸಾರ್ವಜನಿಕ ಸಾರಿಗೆಯ ಕೊರತೆ ಇದೆ. ಸಾರ್ವಜನಿಕ ವಲಯದ ಉದ್ಯಮಗಳು(ಪಿಎಸ್‍ಯು)ಮಾತ್ರ ಕೆಲಸ ಮಾಡುತ್ತವೆ ಎಂಬ ಮೂಢನಂಬಿಕೆಯ ಮನೋಭಾವದಿಂದಾಗಿ ವೈಫಲ್ಯ ಉಂಟಾಗಿದೆ. ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಈ ಕೊರತೆಯನ್ನು ನಿವಾರಿಸಲು ಖಾಸಗಿ ಬಸ್ ಸೇವೆಗಳಿಗೆ ಅವಕಾಶ ನೀಡಬೇಕು’ ಎಂದು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವೀಟ್‍ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News