ಪುಸ್ತಕ ಸೊಗಸು, ಮುದ್ರಣ ಸೊಗಸು ಬಹುಮಾನ ಪ್ರಕಟ
ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನೀಡುವ 2025ನೇ ಸಾಲಿನ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳನ್ನು ಪ್ರಕಟಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿರುವ ಅವರು, 2025ನೇ ಸಾಲಿನ ಕನ್ನಡ ಪುಸ್ತಕ ಸೊಗಸು ಪ್ರಥಮ ಬಹುಮಾನಕ್ಕೆ ದೇವೂ ಮಾಕೊಂಡ ಅವರು ಅನುವಾದಿಸಿರುವ ಯುದ್ಧ ಮೃದಂಗ ಕೃತಿ ಆಯ್ಕೆಯಾಗಿದ್ದು, 25 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಪುಸ್ತಕ ಸೊಗಸು ದ್ವಿತೀಯ ಬಹುಮಾನಕ್ಕೆ ಪುಂಡಲೀಕ ಕಲ್ಲಿಗನೂರ ಅವರ ಶಿಲ್ಪಕಲೆಯಲ್ಲಿ ರಾಮಾಯಣ ಕೃತಿ ಆಯ್ಕೆಯಾಗಿದೆ. ಬಹುಮಾನವು 20 ಸಾವಿರ ರೂ. ನಗದು ಒಳಗೊಂಡಿದ್ದು, ತೃತೀಯ ಬಹುಮಾನಕ್ಕೆ ಚಂಪಾವತಿ ಎಚ್.ಎಸ್ ಅವರ ನೋರಾಳಿಂದ ಗುಲಾಬಿ ಗ್ಯಾಂಗ್‍ವರೆಗೆ ಕೃತಿ ಆಯ್ಕೆಯಾಗಿದ್ದು, 10 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ವಾರ್ಷಿಕ ಪ್ರಶಸ್ತಿ ಹಾಗೂ ಗೌರವ ಪ್ರಶಸ್ತಿಗಳಿಗೆ ಶೀಘ್ರದಲ್ಲಿ ಆಯ್ಕೆ ನಡೆಸಲಾಗುತ್ತದೆ. ಈ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಆಗಸ್ಟ್ ತಿಂಗಳಿನಲ್ಲಿ ಆಯೋಜಿಸಲಾಗುವ ಪ್ರಶಸ್ತಿ ಸಮಾರಂಭದಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಪುಸ್ತಕ, ಮುದ್ರಣ ಸೊಗಸು ಬಹುಮಾನಗಳು: ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಬಿ.ಎ. ಮಮತಾ ಅರಸೀಕೆರೆ ಅವರ ಗೂಡು ಸೇರಿದ ಹಕ್ಕಿಗಳು ಹಾಗೂ ಶೇಖರಯ್ಯ ಟಿ.ಎಚ್.ಎಂ. ಅವರ ಮಾತನಾಡದ ಚುಕ್ಕಿ ಕೃತಿಗಳು ಆಯ್ಕೆಯಾಗಿದ್ದು, 8ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಎ.ಎಸ್.ಮಕಾನದಾರ ಅವರ ದರ್ವೇಶಿ ಪದ್ಯ ಕೃತಿಯ ಮುಖಪುಟ ವಿನ್ಯಾಸಗಾರ ಈಶ್ವರ ಬಡಿಗೇರ ಆಯ್ಕೆಯಾಗಿದ್ದು, 10ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಡಾ. ಅಪ್ಪಗೆರೆ ತಿಮ್ಮರಾಜು ಗ್ರಾಮ ಗೀತೆಗಳು ಕೃತಿಯ ಮುಖಪುಟ ಚಿತ್ರ ಕಲಾವಿದ ಶ್ರೀಪಾದ ಅವರು ಆಯ್ಕೆಯಾಗಿದ್ದು, 8ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ. ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಸುಂದರೇಶ ಡಿ. ಉಡುವಾರೆ ಅವರ ಅರಕಲಗೂಡು ಗತ ವೈಭವ ಕೃತಿ ಆಯ್ಕೆಯಾಗಿದ್ದು, 5 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದ್ದಾರೆ.