×
Ad

ಕನಿಷ್ಠ ವೇತನ ಅಧಿಸೂಚನೆ ಹಿಂಪಡೆದರೆ ರಾಜ್ಯಾದ್ಯಂತ ಹೋರಾಟ : ಕಾರ್ಮಿಕ ಸಂಘಟನೆಗಳ ಎಚ್ಚರಿಕೆ

Update: 2026-07-01 19:58 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕದಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವ ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆಯನ್ನು ಮರುಪರಿಶೀಲನೆ ಅಥವಾ ಹಿಂಪಡೆಯುವ ಯಾವುದೇ ಕ್ರಮ ಕೈಗೊಳ್ಳಬಾರದು. ರಾಜ್ಯ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಜಂಟಿ ಕಾರ್ಮಿಕ ಸಂಘಟನೆಗಳ ಸಮಿತಿ ಎಚ್ಚರಿಕೆ ನೀಡಿದೆ.

ಬುಧವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ, 2017-18ರಿಂದ ಬಾಕಿ ಉಳಿದಿದ್ದ ಕನಿಷ್ಠ ವೇತನ ಪರಿಷ್ಕರಣೆ ಕಾರ್ಮಿಕರ ದೀರ್ಘ ಹೋರಾಟದ ಫಲವಾಗಿ 2026ರ ಮೇ 22ರಂದು ಅಂತಿಮಗೊಂಡಿದೆ. ಈ ಪರಿಷ್ಕರಣೆಯಿಂದ ರಾಜ್ಯದ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ನೇರ ಲಾಭವಾಗಲಿದ್ದು, ಅವರ ಖರೀದಿ ಸಾಮಥ್ರ್ಯ ಹೆಚ್ಚುವುದರ ಜೊತೆಗೆ ರಾಜ್ಯದ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ ಎಂದರು.

ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ಹಿಂಪಡೆದರೆ ಒಂದು ಕೋಟಿಗೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಅನ್ಯಾಯವಾಗಲಿದೆ. ಸರಕಾರ ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯಬಾರದು. ಒಂದು ವೇಳೆ ಹಿಂಪಡೆಯಲು ಮುಂದಾದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಹೋರಾಟಗಳನ್ನು ರೂಪಿಸಿ ಸರಕಾರಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ವರಲಕ್ಷ್ಮಿ ಎಚ್ಚರಿಕೆ ನೀಡಿದರು.

ಎಐಟಿಯುಸಿ ರಾಜ್ಯಾಧ್ಯಕ್ಷ ಪ್ರೊ.ಬಾಬು ಮ್ಯಾಥ್ಯೂ ಮಾತನಾಡಿ, 39 ನಿಗದಿತ ಉದ್ಯೋಗಗಳ ಕನಿಷ್ಠ ವೇತನವನ್ನು ಎಂಟು ವರ್ಷಗಳ ಬಳಿಕ ಪರಿಷ್ಕರಿಸಲಾಗಿದ್ದು, ಈ ವಿಳಂಬವೇ ಕನಿಷ್ಠ ವೇತನ ಕಾಯ್ದೆ ಹಾಗೂ ಸುಪ್ರೀಂಕೋರ್ಟ್ ನಿರ್ದೇಶನಗಳ ಉಲ್ಲಂಘನೆಯಾಗಿದೆ. ವೇತನ ಹೆಚ್ಚಳವು ಸುಮಾರು ಶೇ.40ರಷ್ಟಿದ್ದು, ಉದ್ಯೋಗದಾತರು ಹೇಳುತ್ತಿರುವಂತೆ ಶೇ.60ರಷ್ಟು ಅಲ್ಲ ಎಂದು ಹೇಳಿದರು.

ಎಐಯುಟಿಯುಸಿ ಮುಖಂಡ ಸೋಮಶೇಖರ್ ಯಾದಗಿರಿ ಮಾತನಾಡಿ, ವೇತನ ಸಂಹಿತೆ-2019ರ ಸೆಕ್ಷನ್ 69ರ ಅಡಿಯಲ್ಲಿ ಈ ಅಧಿಸೂಚನೆ ಕಾನೂನುಬದ್ಧವಾಗಿ ಜಾರಿಯಾಗಿದೆ. ಇದನ್ನು ಪ್ರಶ್ನಿಸಿ ಕೆಲ ಉದ್ಯೋಗದಾತರು ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ನ್ಯಾಯಾಲಯದ ತೀರ್ಪು ಬರುವ ಮುನ್ನ ಅಂತಿಮ ಅಧಿಸೂಚನೆಯನ್ನು ಹಿಂಪಡೆಯುವುದು ಕಾನೂನುಬಾಹಿರವಾಗಲಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವೂ ತನ್ನ ಹಿಂದಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಐಸಿಸಿಟಿಯು ಮುಖಂಡ ಅಪ್ಪಣ್ಣ, ಎಚ್‍ಎಂಕೆಪಿ ಮುಖಂಡ ಕಾಳಪ್ಪ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News