×
Ad

ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಗೆ RGUHS ನಿಯೋಗ ಭೇಟಿ; ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಹಯೋಗ ಕುರಿತು ಚರ್ಚೆ

Update: 2026-07-01 20:08 IST

ಬೆಂಗಳೂರು : ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್ ಮೊಹಮ್ಮದ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RGUHS) ಕುಲಪತಿ ಡಾ.ಭಗವಾನ್ ಬಿ.ಸಿ. ಹಾಗೂ ಕರ್ನಾಟಕ ಅಲೈಡ್ ಹೆಲ್ತ್ ಕೌನ್ಸಿಲ್‌ನ ಅಧ್ಯಕ್ಷ ಡಾ.ಇಫ್ತಿಕಾರ್ ಅಲಿ ಫರೀದ್ ಅವರನ್ನು ಒಳಗೊಂಡ RGUHSನ ಉನ್ನತ ಮಟ್ಟದ ನಿಯೋಗವು ಅಮೆರಿಕದ ಬಾಲ್ಟಿಮೋರ್‌ ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಗೆ ಭೇಟಿ ನೀಡಿತು.

ನಿಯೋಗವು ಆಸ್ಪತ್ರೆಯ ಪ್ರಮುಖ ವೈದ್ಯರು, ಸಂಶೋಧಕರು ಮತ್ತು ಶೈಕ್ಷಣಿಕ ತಜ್ಞರೊಂದಿಗೆ ಸಭೆ ನಡೆಸಿತು. ಈ ವೇಳೆ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯ ಹೃದಯ ರಕ್ತನಾಳ ಕೇಂದ್ರ, ಜಠರ ಕರುಳಿನ ಕೇಂದ್ರ, ಎಂಡೋಸ್ಕೋಪಿ ಘಟಕ ಹಾಗೂ ಪುನರ್ವಸತಿ ಚಿಕಿತ್ಸಾಲಯ ಸೇರಿದಂತೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೇವೆಗಳು ಮತ್ತು ತರಬೇತಿ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದುಕೊಂಡಿತು.

ವೈದ್ಯಕೀಯ ಶಿಕ್ಷಣ, ಕ್ಲಿನಿಕಲ್ ಸಂಶೋಧನೆ, ಅಲೈಡ್ ಹೆಲ್ತ್ ಸೈನ್ಸಸ್, ಶೈಕ್ಷಣಿಕ ವಿನಿಮಯ ಕಾರ್ಯಕ್ರಮಗಳು ಮತ್ತು ಸುಧಾರಿತ ಕ್ಲಿನಿಕಲ್ ತರಬೇತಿ ಕ್ಷೇತ್ರಗಳಲ್ಲಿ ಭವಿಷ್ಯದಲ್ಲಿ ಸಹಯೋಗ ವಿಸ್ತರಿಸುವ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯ ಹಿರಿಯ ಅಧ್ಯಾಪಕರು ಮತ್ತು ತಜ್ಞರಾದ ಡಾ.ಆಲಿಸನ್ ಹೇಸ್, ಡಾ. ಶೈಜಾ ಕುಟ್ಟಿ, ಡಾ. ಮೌಯೆನ್ ಖಾಶಾಬ್ ಸೇರಿದಂತೆ ಹಲವರು ಇದ್ದರು.

ಈ ಭೇಟಿಯು ಕರ್ನಾಟಕ ಮತ್ತು ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ನಡುವಿನ ಅಂತರರಾಷ್ಟ್ರೀಯ ಸಹಭಾಗಿತ್ವವನ್ನು ಬಲಪಡಿಸುವ ಹಾಗೂ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅವಿಷ್ಕಾರ ಮತ್ತು ಶ್ರೇಷ್ಠತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಕಟನೆ ತಿಳಿಸಿದೆ.

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News