ಕಸಾಪದ ‘ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ’ಗೆ ಕೋಟಿಗಾನಹಳ್ಳಿ ರಾಮಯ್ಯ, ಬೆಂಜಮಿನ್ ಫ್ರಾನ್ಸಿಸ್ ಆಯ್ಕೆ
ಬೆಂಜಮಿನ್ ಫ್ರಾನ್ಸಿಸ್/ ಕೋಟಿಗಾನಹಳ್ಳಿ ರಾಮಯ್ಯ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‍ನ ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಬೆಂಜಮಿನ್ ಫ್ರಾನ್ಸಿಸ್ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.
ಬುಧವಾರ ಪ್ರಕಟನೆ ನೀಡಿರುವ ಅವರು, ಸಂಚಲನ ಬಳಗ ಬೆಂಗಳೂರು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಕನ್ನಡ ಕ್ರೈಸ್ತ ಸಾಧಕರೊಬ್ಬರಿಗೆ ಹಾಗೂ ಕನ್ನಡ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇನ್ನೊಬ್ಬರಿಗೆ ಪ್ರಶಸ್ತಿ ನೀಡುವ ಉದ್ದೇಶದಿಂದ ದತ್ತಿಯೊಂದನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿಯು ತಲಾ 10 ಸಾವಿರ ರೂ. ನಗದು ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
ಸೋಮವಾರದಂದು ಆಯ್ಕೆ ಸಮಿತಿ ಸದಸ್ಯರಾದ ಡಾ.ಡಿ.ಡೊಮಿನಿಕ್ ಮತ್ತು ದತ್ತಿ ದಾನಿಗಳಾದ ರೀಟಾ ರೀನಿ ಹಾಗೂ ಶ್ರೀ ಪ್ರಶಾಂತ್ ಇಗ್ನೇಷಿಯಸ್ ಅವರ ಸಮ್ಮುಖದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2026ನೇ ಸಾಲಿನ `ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ'ಗೆ ಕೋಲಾರ ಜಿಲ್ಲೆಯ ಕವಿ, ನಾಟಕಕಾರ, ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಕಳೆದ 35ವರ್ಷಗಳಿಂದ ಪಾಶ್ಚಾತ್ಯ ಸಂಗೀತವನ್ನು ಹಾಗೂ ಕನ್ನಡ ಕ್ರೈಸ್ತ ಭಕ್ತಿಗೀತೆಗಳ ರಾಗ ಸಂಯೋಜನೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಬೆಂಜಮಿನ್ ಫ್ರಾನ್ಸಿಸ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.