ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ನಿಯೋಗದಿಂದ ಸಿಎಂ ಭೇಟಿ; ಹೊಸ ಚಲನಚಿತ್ರ ನೀತಿ, ಸರಕಾರಿ ಓಟಿಟಿ, ಸಹಾಯಧನ ಹೆಚ್ಚಳಕ್ಕೆ ಮನವಿ
ಬೆಂಗಳೂರು : ಚಿತ್ರರಂಗ ಉಳಿವಿಗಾಗಿ ಹೊಸ ಚಲನಚಿತ್ರ ನೀತಿ, ಚಲನಚಿತ್ರ ಪ್ರಾಚ್ಯಾಗಾರ (ಆರ್ಕೈವ್) ಸಹಾಯಧನ ಹೆಚ್ಚಳ, ಸರಕಾರದ ಓಟಿಟಿ ವೇದಿಕೆ, ಸಿನಿಮಾಟೋಗ್ರಫಿ ಕಾಯ್ದೆ ತಿದ್ದುಪಡಿ, ಏಕಪರದೆ ಚಿತ್ರಮಂದಿರಗಳ ನವೀಕರಣಕ್ಕೆ ವಿಶೇಷ ನೆರವು, ಚಿತ್ರರಂಗದವರಿಗೆ ಫ್ಲಾಟ್ ನಿರ್ಮಾಣಕ್ಕೆ ಬಿಡಿಎಯಿಂದ ಐದು ಎಕರೆ ಭೂಮಿ ನೀಡಬೇಕು ಎಂದು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲ ನೇತೃತ್ವದ ನಿಯೋಗವು ಮನವಿ ಮಾಡಿದೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಹೊಸ ಚಲನಚಿತ್ರ ನೀತಿ ತರಲು ಚರ್ಚೆ, ಸಹಾಯಧನ ಹೆಚ್ಚಳ, ಪ್ರಾಚ್ಯಾಗಾರ ಪ್ರಾರಂಭಿಸಲು ಈ ವರ್ಷದ ಚಲನಚಿತ್ರ ಪ್ರಶಸ್ತಿ ಪ್ರಕ್ರಿಯೆ ಪ್ರಾರಂಭಿಸಿಲು ಸೂಕ್ತ ಕ್ರಮ, ಬಿಡಿಎಯಿಂದ ಐದು ಎಕರೆ ಭೂಮಿ ನೀಡುವುದು ಹಾಗೂ ಚಿತ್ರನಗರಿ ನಿರ್ಮಾಣಕ್ಕೆ ಘೋಷಣೆ ಮಾಡಿರುವ ಅನುದಾನದ ಬಿಡುಗಡೆಯ ಬಗ್ಗೆ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.