×
Ad

ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ ಎಚ್.ಆರ್.ಸ್ವಾಮಿ ಆಯ್ಕೆ

Update: 2026-07-01 23:34 IST

ಸಾಂದರ್ಭಿಕ ಚಿತ್ರ


ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‍ನ `ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ'ಗೆ ಡಾ.ಎಚ್.ಆರ್.ಸ್ವಾಮಿ ಅವರು ಆಯ್ಕೆಯಾಗಿದ್ದಾರೆ ಎಂದು ಕಸಾಪ ಆಡಳಿತಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ.

ಬುಧವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ‘ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ'ಯನ್ನು ಸ್ಥಾಪಿಸಿದೆ. ಈ ಪ್ರಶಸ್ತಿಯನ್ನು ಡಾ. ಸಿದ್ದಲಿಂಗಯ್ಯ ಅವರ ಹೋರಾಟದ ಆಶಯಕ್ಕೆ ಧಕ್ಕೆ ಬರದಂತೆ ಅವರ ಸಾಹಿತ್ಯವೂ ಸೇರಿದಂತೆ ವಿಚಾರಧಾರೆ, ಚಲನಚಿತ್ರ, ದಲಿತ ಚಳುವಳಿ, ಸಾಮಾಜಿಕ ಚಳುವಳಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರೊಬ್ಬರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿಯು 10 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. ಸೋಮವಾರ ಆಯ್ಕೆ ಸಮಿತಿ ಸದಸ್ಯರಾದ ಡಾ.ರಾಜಪ್ಪ ದಳವಾಯಿ, ಶ್ರೀದೇವಿ ಕೆರೆಮನೆ ಮತ್ತು ದತ್ತಿ ದಾನಿಗಳಾದ ರಮಾಕುಮಾರಿ ಸಿದ್ದಲಿಂಗಯ್ಯ, ಡಾ.ಮಾನಸಾ ಸಿದ್ದಲಿಂಗಯ್ಯ ಅವರ ಸಮ್ಮುಖದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2026ನೇ ಸಾಲಿನ `ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ'ಗೆ ದಲಿತ-ರೈತ-ವಿಜ್ಞಾನ ಚಳವಳಿ, ಪರಿಸರ ಹಾಗೂ ರಂಗ ಚಟುವಟಿಕೆ ಮತ್ತು ಇತರ ಪ್ರಗತಿಪರ ಆಂದೋಲನಗಳಲ್ಲಿ ಗುರುತಿಸಿಕೊಂಡಿರುವ ಡಾ.ಎಚ್.ಆರ್.ಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಿದೆ ಎಂದು ತಿಳಿಸಿದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News