×
Ad

ಜಿಬಿಎ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ: ಒತ್ತುವರಿದಾರರಿಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಮನವಿ

Update: 2026-07-01 23:18 IST

ಬೆಂಗಳೂರು : ಗ್ರೇಟರ್ ಬೆಂಗಳೂರು ಅಭಿವೃದ್ಧಿ(ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಸಾರ್ವಜನಿಕರಿಗೆ ಸುರಕ್ಷಿತ, ಸುಗಮ ಹಾಗೂ ಅಡೆತಡೆಯಿಲ್ಲದ ಪಾದಚಾರಿ ಸಂಚಾರವನ್ನು ಕಲ್ಪಿಸುವ ಉದ್ದೇಶದಿಂದ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ”ದ ಅಂಗವಾಗಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆಯು ಜು.1ರಿಂದ ಯಶಸ್ವಿಯಾಗಿ ಚಾಲನೆ ನೀಡಲಾಗಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ರವರ ನಿರ್ದೇಶನ ಹಾಗೂ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಮಾರ್ಗದರ್ಶನದಂತೆ ಜು.1ರ ಬುಧವಾರದಂದು ಎಲ್ಲ ಐದು ನಗರ ಪಾಲಿಕೆಗಳ ಪ್ರಮುಖ ರಸ್ತೆಗಳಲ್ಲಿ ಬರುವ ಪಾದಚಾರಿ ಮಾರ್ಗಗಳಲ್ಲಿದ್ದ ಅಡೆತಡೆಗಳನ್ನು ತೆರವುಗೊಳಿಸಿ, ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.

ಪಾದಚಾರಿ ಮಾರ್ಗಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳನ್ನು ಅತಿಕ್ರಮಣ ಮಾಡಿಕೊಂಡರೆ ನಾಗರಿಕರ ಓಡಾಟಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ. ನಾಗರಿಕರು ಯಾವುದೇ ಅಡೆತಡೆಯಿಲ್ಲದೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ಪಾದಚಾರಿ ಮಾರ್ಗಗಳನ್ನು ಮುಕ್ತಗೊಳಿಸಲಾಗುತ್ತಿದೆ.

ಪಾಲಿಕೆ ಅಧಿಕಾರಿ/ಸಿಬ್ಬಂದಿಗಳು ಪೊಲೀಸ್ ಭದ್ರತೆಯೊಂದಿಗೆ, ಜೆಸಿಬಿಗಳು, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳನ್ನು ಬಳಿಸಿಕೊಂಡು, ಪಾದಚಾರಿ ಮಾರ್ಗಗಳ ಮೇಲೆ ಅನಧಿಕೃತವಾಗಿ ಅಳವಡಿಸಲಾಗಿರುವ ನಾಮಫಲಕಗಳು, ಮೆಟ್ಟಿಲುಗಳು, ಓಎಫ್‍ಸಿ ಕೇಬಲ್‍ಗಳು, ಅಂಗಡಿಗಳ ಮೇಲ್ಭಾಗದಲ್ಲಿ ಅಳವಡಿಸಿರುವ ಶೀಟ್‍ಗಳು, ಕಟ್ಟಡ ತ್ಯಾಜ್ಯ, ತಳ್ಳು ಗಾಡಿಗಳು, ಶಾಶ್ವತ ಪೆಟ್ಟಿಗೆಗಳು, ತಾತ್ಕಾಲಿಕ ಶೆಡ್‍ಗಳು, ಅನಧಿಕೃತ ಕಬ್ಬಿಣದ ರಚನೆಗಳು ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿರುವ ಎಲ್ಲ ರೀತಿಯ ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ.

ಜಿಬಿಎ ವ್ಯಾಪ್ತಿಯ ಐದೂ ನಗರ ಪಾಲಿಕೆಗಳಲ್ಲಿ ಅಂಗಡಿ ಮಾಲಕರು, ವಾಣಿಜ್ಯ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹಾಗೂ ಬೀದಿಬದಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಗಳನ್ನು ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದಲ್ಲಿ ನಿಯಮಾನುಸಾರ ತೆರವು ಕಾರ್ಯಾಚರಣೆ ನಡೆಸಿ, ಅಗತ್ಯವಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೂಡಾ ನೀಡಲಾಗಿದೆ.

•ಬೆಂಗಳೂರು ಪೂರ್ವ ನಗರ ಪಾಲಿಕೆ:

ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತ ರಮೇಶ್ ಡಿ. ಅವರ ನೇತೃತ್ವದಲ್ಲಿ ಮಾರತಹಳ್ಳಿಯಿಂದ ಇಬ್ಲೂರು ಜಂಕ್ಷನ್, ಹೋಫ್ ಫಾರ್ಮ್‍ನಿಂದ ವರ್ತೂರು, ಐಟಿಪಿಎಲ್ ಮುಖ್ಯ ರಸ್ತೆ, ಹೊರ ವರ್ತುಲ ರಸ್ತೆ, ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ ಮುಖ್ಯ ರಸ್ತೆ, ಕುಂದಲಹಳ್ಳಿ, ಹೂಡಿ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

•ಬೆಂಗಳೂರು ಕೇಂದ್ರ ನಗರ ಪಾಲಿಕೆ:

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಅವರ ನೇತೃತ್ವದಲ್ಲಿ ಟ್ರಿನಿಟಿ ಜಂಕ್ಷನ್‍ನಿಂದ ಎಂಜಿ ಉದ್ಯಾನದವರೆಗೆ, 100 ಅಡಿ ಇಂದಿರಾನಗರದಿಂದ ದೊಮ್ಮಲೂರು ಮೇಲ್ಸೇತುವೆಯವರೆಗೆ, ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಬೆನಗನಹಳ್ಳಿ ರೈಲ್ವೇ ಸೇತುವೆವರೆಗೆ, ಅಶೋಕ್ ಪಿಲ್ಲರ್ ಇಂದ ಮಾದವನ್ ಪಾರ್ಕ್‍ವರೆಗೆ, 8ನೇ ಮುಖ್ಯ ಹಾಗೂ 9ನೇ ಮುಖ್ಯ ರಸ್ತೆ ಕನಕನಪಾಳ್ಯ ರಸ್ತೆಯಿಂದ 15ನೇ ಅಡ್ಡ ರಸ್ತೆ ಜಯನಗರವರೆಗೆ, ಆರ್.ವಿ.ರಸ್ತೆ ಟೀಚರ್ಸ್ ಕಾಲೇಜಿನಿಂದ ಸೌತ್ ಎಂಡ್ ಸರ್ಕಲ್‍ವರೆಗೆ, ಓಕಳೀಪುರಂ, ಮೆಜೆಸ್ಟಿಕ್ ಪ್ರದೇಶದಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

•ಬೆಂಗಳೂರು ದಕ್ಷಿಣ ನಗರ ಪಾಲಿಕೆ:

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ರಮೇಶ್ ಕೆ.ಎನ್. ಅವರ ನೇತೃತ್ವದಲ್ಲಿ ಉತ್ತರಹಳ್ಳಿ, 80 ಅಡಿ ರಸ್ತೆ ಆರ್.ವಿ. ಇನ್‍ಸ್ಟಿಟ್ಯೂಟ್, ಕೊತ್ತನೂರು, ವಿಶ್ವಪ್ರಿಯ ಲೇಔಟ್, ಪದ್ಮನಾಭ ನಗರದ ಗುರುರಾಜ ಲೇಔಟ್, ಜಯನಗರ ಆರ್.ವಿ. ರಸ್ತೆ, ಜೆ.ಪಿ.ನಗರ, ಎಚ್.ಎಸ್.ಆರ್. ಲೇಔಟ್, ಕೋರಮಂಗಲ, ಬಿಟಿಎಂ 2ನೇ ಹಂತ ಸೇರಿದಂತೆ ಇತರೆ ಪ್ರಮುಖ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಿಗಳು ಹಾಗೂ ಅಂಗಡಿ ಮುಂಗಟ್ಟುಗಳಿಂದ ಉಂಟಾಗಿದ್ದ ಒತ್ತುವರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

•ಬೆಂಗಳೂರು ಉತ್ತರ ನಗರ ಪಾಲಿಕೆ:

ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಯಲಹಂಕ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ಹೆಬ್ಬಾಳದ ಮುನಿರೆಡ್ಡಿ ಪಾಳ್ಯ ರಸ್ತೆ, ವಿದ್ಯಾರಣ್ಯಪುರ ಮುಖ್ಯ ರಸ್ತೆ, ಸಹಕಾರ ನಗರ(ರೈಲ್ವೆ ಪರ್ಯಾಯ ರಸ್ತೆ), ಕ್ಲಾರ್ಕ್ ರಸ್ತೆ, ಬಾಣಸವಾಡಿ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

•ಬೆಂಗಳೂರು ಪಶ್ಚಿಮ ನಗರ ಪಾಲಿಕೆ:

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತ ಡಾ.ರಾಜೇಂದ್ರ ಕೆ.ವಿ. ಅವರ ನೇತೃತ್ವದಲ್ಲಿ ತುಮಕೂರು ಮುಖ್ಯ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಮಾಗಡಿ ಮುಖ್ಯ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎಂ.ಇ.ಐ ರಸ್ತೆ, ಎಂ.ಕೆ.ಕೆ ರಸ್ತೆ, ದಾಸರಹಳ್ಳಿ(ಲೇಕ್ ರಸ್ತೆ), ಚಂದ್ರ ಲೇಔಟ್, ಗೋವಿಂದರಾಜನಗರ, ಪಾಲಿಕೆ ಬಜಾರ್, ಸಂಪಿಗೆ ರಸ್ತೆ, ರಾಜಾಜಿನಗರ, ಡಿವಿಜಿ ರಸ್ತೆ, ಬುಲ್ ಟೆಂಪಲ್ ರಸ್ತೆ, ಕತ್ರಿಗುಪ್ಪೆ ರಸ್ತೆ, ಭುವನೇಶ್ವರಿ ನಗರದ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

 

ಅಭಿಯಾನ ನಿರಂತರ ಮುಂದುವರಿಕೆ: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಈ ವಿಶೇಷ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಲಾಗುವುದು. ಸಾರ್ವಜನಿಕರಿಂದ ಬರುವ ದೂರುಗಳಿಗೂ ತ್ವರಿತವಾಗಿ ಸ್ಪಂದಿಸಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.

‘ಬೆಂಗಳೂರಿನ ನಿವಾಸಿಗಳಿಗೆ-ನಾಗರಿಕರಿಗೆ ಸುರಕ್ಷಿತ ಪಾದಾಚಾರಿ ಮಾರ್ಗ ಬಳಸುವ ಹಕ್ಕಿದೆ. ಆದ್ದರಿಂದ ಪಾದಚಾರಿ ಮಾರ್ಗಗಳನ್ನು ಒತ್ತುವರಿರಹಿತವಾಗಿಡಲು ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ಎಲ್ಲಾ ವಾಣಿಜ್ಯ ಸಂಸ್ಥೆಗಳು ನಗರ ಆಡಳಿತದೊಂದಿಗೆ ಕೈಜೋಡಿಸಬೇಕು. ಇದು ಸರಕಾರದ ಅಭಿಯಾನ ಮಾತ್ರವಲ್ಲ, ನಾಗರಿಕರ ಸಹಭಾಗಿತ್ವದ ಜನಾಂದೋಲನವಾಗಬೇಕು. ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಸರಕಾರ ಬದ್ಧವಾಗಿದ್ದು, ಶೇ.20ರಷ್ಟು ಆದ್ಯತೆಯ ರಸ್ತೆಗಳನ್ನು ಹೊರತುಪಡಿಸಿ, ಉಳಿದ ರಸ್ತೆಗಳಲ್ಲಿ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗದಂತೆ ವ್ಯಾಪಾರ ಮಾಡಿಕೊಳ್ಳಲು ನಾನು ಮನವಿ ಮಾಡುತ್ತೇನೆ.’

-ಕೃಷ್ಣಬೈರೇಗೌಡ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News