Hassan | ಚಲಿಸುತ್ತಿದ್ದ ರೈಲಿನಲ್ಲಿ ಹೆರಿಗೆ ಮಾಡಿಸಿದ ವೈದ್ಯ ವಿದ್ಯಾರ್ಥಿನಿಯರು
ಸಾಂದರ್ಭಿಕ ಚಿತ್ರ
ಹಾಸನ : ಚಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಯೊಬ್ಬರಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲದ ಪರಿಸ್ಥಿತಿಯಲ್ಲಿಯೇ ಸುರಕ್ಷಿತ ಹೆರಿಗೆ ಮಾಡಿಸಿ ತಾಯಿ ಹಾಗೂ ನವಜಾತ ಶಿಶುವಿನ ಜೀವ ಉಳಿಸಿದ ಘಟನೆ ವರದಿಯಾಗಿದೆ.
ನಗರದ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ರಶ್ಮಿ ಬಿಳಗಿ, ಡಾ. ಲತಾಶ್ರೀ ಎನ್. ಮತ್ತು ಡಾ. ಶಾಹಿನ್ ಎಂ. ಅವರು ರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹಠಾತ್ತನೆ ತೀವ್ರ ಹೆರಿಗೆ ನೋವು ಆರಂಭವಾಯಿತು. ರೈಲು ಆಸ್ಪತ್ರೆಯಿಂದ ದೂರ ಸಾಗುತ್ತಿದ್ದ ಕಾರಣ ತಕ್ಷಣ ವೈದ್ಯಕೀಯ ನೆರವು ದೊರೆಯುವ ಸಾಧ್ಯತೆ ಇರಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಮೂವರು ವೈದ್ಯೆಯರು ವಿಳಂಬ ಮಾಡದೆ ಮಹಿಳೆಯ ನೆರವಿಗೆ ಧಾವಿಸಿದರು. ಸಹ ಪ್ರಯಾಣಿಕರ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಮಾಡಿಕೊಂಡು, ರೈಲಿನಲ್ಲಿಯೇ ಹೆರಿಗೆ ಪ್ರಕ್ರಿಯೆಯನ್ನು ನಿರ್ವಹಿಸಿದರು.ಈ ಘಟನೆಯ ಬಳಿಕ ರೈಲಿನಲ್ಲಿದ್ದ ಸಹ ಪ್ರಯಾಣಿಕರು ವೈದ್ಯೆಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಪ್ರಸ್ತುತ ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.