ಎಸ್‌ಐಆರ್ ಕಾರಣಕ್ಕೆ ಮುಸ್ಲಿಮರು ಬಾಂಗ್ಲಾ ಮೂಲದವರಾದರೇ? : ಕೇಂದ್ರ ಸಚಿವ ಎಚ್‌ಡಿಕೆಗೆ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರಶ್ನೆ
ಬೆಂಗಳೂರು : ‘ತಮ್ಮ ಪಕ್ಷಕ್ಕೆ ಮತ ಹಾಕಿಸಿಕೊಳ್ಳುತ್ತಿದ್ದ ವೇಳೆ ಮುಸ್ಲಿಮರೆಲ್ಲರೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪಾಲಿಗೆ ಸ್ಥಳೀಯರಾಗಿದ್ದರು. ಇದೀಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕಾರಣಕ್ಕೆ ಅವರೆಲ್ಲ ಬಾಂಗ್ಲಾದೇಶದ ಮೂಲದವರಾಗಿ ಕಾಣುತ್ತಿದ್ದಾರೆ’ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ವಿಷಯದಲ್ಲಿ ಬಿಜೆಪಿ-ಜೆಡಿಎಸ್‌ನ ಮುಖಂಡರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ಒಂದು ಕೋಮಿನ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದು, ರಾಜಕೀಯಕ್ಕಾಗಿ ಕುಮಾರಸ್ವಾಮಿ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬೂತ್ ಮಟ್ಟದಲ್ಲಿ ಎಸ್‌ಐಆರ್ ಕೆಲಸ ಮಾಡುತ್ತಿರುವ ಶಿಕ್ಷಕರ ಮೇಲೆ ಗೂಬೆ ಕೂರಿಸಿ, ಅವರಿಗೆ ಅವಮಾನ ಮಾಡುತ್ತಿದ್ದಾರೆ. ಇಷ್ಟಕ್ಕೂ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವುದು ಕೇಂದ್ರ ಚುನಾವಣಾ ಆಯೋಗದಿಂದಲೇ ಹೊರತು ರಾಜ್ಯ ಸರಕಾರದಿಂದ ಅಲ್ಲವೆಂಬುದು ಗೊತ್ತಿರಬೇಕು ಎಂದು ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದರು.